ಕೃಷ್ಣಂ ಪ್ರಣಯ ಸಖಿ

ನಿರ್ದೇಶಕರಿಗೆ ಗೆಲುವು ಅರ್ಪಿಸಿದ ಗಣೇಶ್‍

‘ಕೃಷ್ಣಂ ಪ್ರಣಯ ಸಖಿ’ ಚಿತ್ರ  25 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ನಾಯಕ ಗಣೇಶ್ ನಿರ್ದೇಶಕರಿಗೆ ಗೆಲುವು ಅರ್ಪಿಸಿದ್ದಾರೆ.

ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ, ಶ್ರೀನಿವಾಸರಾಜು ನಿರ್ದೇಶನದ  ‘ಕೃಷ್ಣಂ ಪ್ರಣಯ ಸಖಿ’ ಚಿತ್ರ 25 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಚಿತ್ರತಂಡ  ಪ್ರಸನ್ನ ಚಿತ್ರಮಂದಿರದಲ್ಲಿ ಸೋಮವಾರ ರಾತ್ರಿ ವಿಶೇಷ ಸಮಾರಂಭ ಆಯೋಜಿಸಿ,  ಕಲಾವಿದರು ಮತ್ತು ತಂತ್ರಜ್ಞರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದೆ. ಈ ಸಂದರ್ಭದಲ್ಲಿ ಗಣೇಶ್‍, ಶರಣ್ಯ ಶೆಟ್ಟಿ, ಶಶಿಕುಮಾರ್‍, ಗಿರಿ ಶಿವಣ್ಣ, ಹಿರಿಯ ನಟರಾದ ರಾಮಕೃಷ್ಣ ಮತ್ತು ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ನಿರ್ದೇಶಕ ಶ್ರೀನಿವಾಸರಾಜು ಸೇರಿದಂತೆ ಹಲವರು ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್‍, ‘ನಿರ್ದೇಶಕರಿದ್ದರೆ  ದೊಡ್ಡ ಕನಸಿದ್ದರೆ ಒಂದು ಚಿತ್ರ ಆಗೋಕೆ ಸಾಧ್ಯ.  ಕಥೆ ಅವರ ಕಲ್ಪನೆ. ಅವರು ಬೀಜ  ಮರವಾಗಿ ಬೆಳೆದು ಅದನ್ನು ನಮ್ಮ ಹತ್ತಿರ ಬಿಡುತ್ತಾರೆ. ಆ ಮರದ ಕೆಳಗೆ ನಾವಿರುತ್ತೇವೆ ಅಷ್ಟೇ. ಅವರು ಕಷ್ಟಪಟ್ಟು ಕಥೆ ಮಾಡಿರುತ್ತಾರೆ. ನಾವು ಅಭಿನಯಿಸುತ್ತೇವೆ ಅಷ್ಟೇ. ಈ ಚಿತ್ರದ ಗೆಲುವಿನಲ್ಲಿ ನಿರ್ದೇಶಕರಿಗೆ ಸಿಂಹಪಾಲು ಸಲ್ಲಬೇಕು. ಅವರು ಹಗಲು-ರಾತ್ರಿ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಾವು ಸಲಹೆ ಕೊಡಬಹುದು. ಅದು ಎಷ್ಟು ತೆಗೆದುಕೊಳ‍್ಳಬೇಕು, ಎಷ್ಟು ಬಿಡಬೇಕು ಎಂದು ನಿರ್ದೇಶಕರಿಗೆ ಗೊತ್ತಿರಬೇಕು. ಅಂಥದ್ದೊಂದು ಅದ್ಭುತ ಕೌಶಲ್ಯ ಇರುವ ನಿರ್ದೇಶಕ ಶ್ರೀನಿವಾಸರಾಜು. ಗೆಲುವು ಅವರಿಗೆ ಸಲ್ಲಬೇಕು’ ಎಂದರು.

ಕೃಷ್ಣಂ ಪ್ರಣಯ ಸಖಿ

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಕಲೆಕ್ಷನ್‍  25ನೇ ದಿನದ ಸಮಾರಂಭದಲ್ಲಿ ಹೇಳುವುದಾಗಿ ಹೇಳಿದ್ದ ಗಣೇಶ್‍ ಕಲೆಕ್ಷನ್‍ ಹೇಳಲಿಲ್ಲ.

‘ಚಿತ್ರದ ಚಿತ್ರೀಕರಣ ಶುರುವಾಗಿ ಎರಡು ದಿನಗಳ ನಂತರ ನಾನು ಮತ್ತು ನಿರ್ದೇಶಕರು ಚರ್ಚೆ ಮಾಡುತ್ತಾ ಕುಳಿತಿದ್ದೆವು. ಆ ಸಂದರ್ಭದಲ್ಲಿ ಅವರೊಂದು ಮೊತ್ತ ಹೇಳಿದರು. ಈ ಚಿತ್ರ ಅಷ್ಟು ಹಣ ಮಾಡಬೇಕು ಎಂದು ಆಸೆಪಡುತ್ತೀನಿ ಎಂದರು. ಅವರು ಹೇಳಿದ ಮೊತ್ತ 25 ದಿನಕ್ಕೆ ಪೂರ್ತಿ ಆಗಿಲ್ಲ. ಅದರ ಹತ್ತಿರ ಬಂದಿದ್ದೇವೆ. 50 ದಿನಕ್ಕೆ ರೀಚ್‍ ಆಗುತ್ತೇವೆ’ ಎಂದರು.

‘ಕೃಷ್ಣಂ ಪ್ರಣಯ ಸಖಿ’ ಆಗಸ್ಟ್ 15ರಂದು  ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!