ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ 100 ಕೋಟಿ ರೂ. ಕ್ಲಬ್ ಪಟ್ಟಿಗೆ ಸೇರಿದೆ.
ಗಣರಾಜ್ಯೋತ್ಸವದಂದು (ಜ. 26) ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಅಧಿಕೃತವಾಗಿ 100 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ. ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಕೂಡ ಭಾರಿ ಬೆಲೆಗೆ ಮಾರಾಟವಾಗಿವೆ ಎನ್ನಲಾಗಿದೆ.
ಚಿತ್ರ ಥಿಯೇಟರ್ ಳಲ್ಲಿಯೂ ಗಳಿಕೆ ಕಾಣುತ್ತಲೇ ಸಾಗಿದೆ. ವಿ ಹರಿಕೃಷ್ಣ ಬರೆದು ನಿರ್ದೇಶಿಸಿರುವ ಕ್ರಾಂತಿ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು, ಸರ್ಕಾರಿ ಶಾಲೆಗಳನ್ನು ರಕ್ಷಿಸುವ ಬಲವಾದ ಸಂದೇಶವನ್ನು ಹೊಂದಿರುವ ಮಾಸ್ ಚಿತ್ರವಾಗಿದೆ.
ಚಿತ್ರದ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ಮಾಪಕಿ ಶೈಲಜಾ ನಾಗ್, ದರ್ಶನ್ ಅವರ ಮಾಸ್ ಫ್ಯಾನ್ ಫಾಲೋಯಿಂಗ್ ಚಿತ್ರ ರಾಜ್ಯದಾದ್ಯಂತ ಸಿಂಗಲ್ ಥಿಯೇಟರ್ ಗಳಲ್ಲಿ ಅಸಾಧಾರಣ ಹಿಟ್ ಆಗಲು ಸಹಾಯ ಮಾಡಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಚಿತ್ರ ಪ್ರೇಕ್ಷಕರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಚಿತ್ರ ಬಿಕೆಟಿ (ಬೆಂಗಳೂರು, ಕೋಲಾರ ಮತ್ತು ತುಮಕೂರು), ಎಂಎಂಸಿಎಚ್ (ಮೈಸೂರು, ಮಂಡ್ಯ, ಮಡಿಕೇರಿ ಮತ್ತು ಹಾಸನ), ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಬೆಳಗಾವಿ ಮತ್ತು ಹೈದರಾಬಾದ್-ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಶೈಲಜಾ ಹೇಳಿದ್ದಾರೆ.
ನಮ್ಮ ಪ್ರಯತ್ನಗಳು ಫಲ ನೀಡಿವೆ. ನನಗೆ ಖುಷಿಯಾಗಿದೆ. ಕ್ರಾಂತಿ ಸಿನಿಮಾವು ಯಜಮಾನ ನಂತರ ದರ್ಶನ್ ಅವರೊಂದಿಗಿನ ನಮ್ಮ ಎರಡನೇ ಚಿತ್ರವಾಗಿದೆ. ಇದು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದ್ದಾರೆ.
ರವಿಚಂದ್ರನ್ ಮತ್ತು ಸುಮಲತಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕ್ರಾಂತಿಯಲ್ಲಿ ರಚಿತಾ ರಾಮ್, ಸಂಯುಕ್ತ ಹೊರ್ನಾಡ್, ವೈನಿಧಿ ಜಗದೀಶ್ ಮತ್ತು ಸಾಧು ಕೋಕಿಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕರುಣಾಕರ್ ಅವರ ಛಾಯಾಗ್ರಹಣ, ನಿರ್ದೇಶನದ ಜೊತೆಗೆ ಹರಿಕೃಷ್ಣ ಅವರೇ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
__
Be the first to comment