‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದಲ್ಲಿ ಕೋಮಲ್ ಕುಮಾರ್ ಡಬಲ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೋಮಲ್ ಅವರು ಒಂದು ಪಾತ್ರದಲ್ಲಿ ಆಸ್ಥಾನ ವರ್ಣಚಿತ್ರ ಕಲಾವಿದನಾಗಿ ಮತ್ತು ಮತ್ತೊಂದು ಪಾತ್ರದಲ್ಲಿ ಸಿನಿಮಾ ನಿರ್ದೇಶಕರಾಗಿ ಅಭಿನಯಿಸಿದ್ದಾರೆ. ಮೇಘನಾ ರಾಜ್ ರಾಣಿ ಹಾಗೂ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಎರಡು ಹಂತಗಳಲ್ಲಿ ಸುಮಾರು 75 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಈಗ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿದೆ.
ಚಿತ್ರಕ್ಕೆ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನ ಮಾಡಿದ್ದಾರೆ. ವಿಕಾಸ್ ಶೆಟ್ಟಿ ಬಂಡವಾಳ ಹೂಡಿದ್ದಾರೆ.
ಚಿತ್ರದ ಶೂಟಿಂಗ್ ಕುಂದಾಪುರ, ಶಿವಮೊಗ್ಗ ಮತ್ತು ತೀರ್ಥಹಳ್ಳಿ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಡೆದಿದೆ. ಕುಂದಾಪುರದ ವಾಲ್ತೂರು ಗ್ರಾಮದಲ್ಲಿ 2 ಎಕರೆ ಪ್ರದೇಶದಲ್ಲಿ ಏಳು ವಿಭಿನ್ನ ವಿನ್ಯಾಸದ ಬೃಹತ್ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗಿದೆ.
ಚಿತ್ರಕ್ಕೆ ಆರಂಭದಲ್ಲಿ ಎರಡು ಶೀರ್ಷಿಕೆಗಳನ್ನು ಪರಿಗಣಿಸಲಾಗಿತ್ತು. ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಹಾಗೂ ‘ದೇವರ ತಾಣ’ ಎಂಬ ಎರಡು ಟೈಟಲ್ ಇತ್ತು. ಸೆನ್ಸಾರ್ ನಿಯಮದ ಪ್ರಕಾರ ಒಂದೇ ಶೀರ್ಷಿಕೆ ಇರಬೇಕಾದ ಕಾರಣ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಹೆಸರಿನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಚಿತ್ರದ ಮೊದಲಾರ್ಧ ಬಾರ್ ಹಿನ್ನೆಲೆಯಲ್ಲಿದ್ದು, ದ್ವಿತೀಯಾರ್ಧ ದೇವರ ತಾಣದ ಸನ್ನಿವೇಶಗಳಲ್ಲಿ ಸಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಪ್ರಮೋದ್ ಶೆಟ್ಟಿ, ವಜ್ರಧೀರ್ ಜೈನ್, ಪ್ರಕಾಶ್ ತುಮ್ಮಿನಾಡ್, ಉತ್ಸವ್, ರಾಘು ರಾಮನಕೊಪ್ಪ, ಕಾರ್ತಿಕ್ ರಾವ್, ಸಿರಿಜಾ, ವರ್ಧನ್, ರಾಧಿಕ ರಾವ್, ದಿವ್ಯಶ್ರೀ, ಮನೀಶ್ ಶೆಟ್ಟಿ, ಮಹಾಬಲೇಶ್ವರ ಭಟ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
_





Be the first to comment