ನಿರ್ದೇಶನ: ಪ್ರಶಾಂತ್ ವೈಭವ್
ನಿರ್ಮಾಣ: ಕೆ ಉದಯ್
ತಾರಾ ಬಳಗ: ವಿಘ್ನೇಶ್, ಸಂಗೀತಾ ಭಟ್, ಶೋಭರಾಜ್, ವೀಣಾ ಸುಂದರ್ ಇತರರು
ರೇಟಿಂಗ್: 3.5/5
ಸ್ವಚ್ಛಂದವಾಗಿ ನಿಸರ್ಗದಲ್ಲಿ ವಿಹರಿಸಲು ಹೋಗುವ ಪ್ರೇಮಿಗಳಿಗೆ ನಿಸರ್ಗದ ಸಂಪತ್ತನ್ನು ಕೊಳ್ಳೆಹೊಡೆಯುವ ದುಷ್ಕರ್ಮಿಗಳು ಯಾವ ರೀತಿ ತೊಂದರೆ ಕೊಡುತ್ತಾರೆ? ಪ್ರೇಮಿಗಳು ಆಯ್ದುಕೊಳ್ಳುವ ಜಾಗ ಎಷ್ಟು ಸುರಕ್ಷಿತ ಇರಬೇಕು ಎನ್ನುವ ಸಂದೇಶ ನೀಡುವ ಚಿತ್ರವಾಗಿ ಕ್ಲಾಂತ ಈ ವಾರ ತೆರೆಯ ಮೇಲೆ ಬಂದಿದೆ.
ಪ್ರಕೃತಿಯ ಮಧ್ಯೆ ವಿಹಾರ ಹೋಗುವ ಪ್ರೇಮಿಗಳಿಗೆ ಕಾಡಿನ ಸಂಪತ್ತನ್ನು ದೋಚುವ ದುಷ್ಟರು ತೊಂದರೆ ನೀಡುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸುವ ವೇಳೆ ಅವರಿಗೆ ಪ್ರಾಣಾಪಾಯದ ಭೀತಿ ಎದುರಾಗುತ್ತದೆ. ಮುಂದೆ ಪ್ರೇಮಿಗಳಿಂದ ಒಂದಷ್ಟು ಪ್ರಮಾದ ನಡೆಯುತ್ತದೆ. ಅದು ಏನು ಎಂದು ತಿಳಿದುಕೊಳ್ಳಲು ಚಿತ್ರವನ್ನು ನೋಡಬೇಕಿದೆ.
ಚಿತ್ರದ ಮೊದಲಾರ್ಧ ನಾಟಕೀಯವಾಗಿ ಸಾಗುತ್ತದೆ. ಆದರೆ ನಂತರದ ಭಾಗ ಹೊಸ ತಿರುವು ಪಡೆದುಕೊಂಡು ಥ್ರಿಲ್ಲರ್ ಕಡೆಗೆ ಹೊರಳುತ್ತದೆ. ಚಿತ್ರ ನೋಡುವ ಪ್ರೇಕ್ಷಕರಲ್ಲಿ ಕುತೂಹಲ ಉಂಟಾಗುತ್ತದೆ.
ನಿರ್ದೇಶಕ ಪ್ರಶಾಂತ್ ವೈಭವ್ ಒಂದು ಒಳ್ಳೆಯ ಕಥೆಯನ್ನು ಆರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕುತೂಹಲದೊಂದಿಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡುವ ಯತ್ನ ಮಾಡಿದ್ದಾರೆ. ಇಲ್ಲಿ ತುಳುನಾಡಿನ ಪ್ರಮುಖ ದೈವವಾದ ಕೊರಗಜ್ಜನ ಮಹಿಮೆಯನ್ನು ಹೇಳುವ ಯತ್ನ ಮಾಡಲಾಗಿದೆ. ಇದನ್ನು ಇನ್ನಷ್ಟು ಮನಸ್ಸಿಗೆ ನಾಟುವಂತೆ ತೆರೆಯ ಮೇಲೆ ತಂದಿದ್ದರೆ ಚಿತ್ರಕ್ಕೆ ಇನ್ನಷ್ಟು ಅರ್ಥ ಬರುತ್ತಿತ್ತು ಅನಿಸುತ್ತದೆ.
ವಿಘ್ನೇಶ್ ಚಿತ್ರದಲ್ಲಿ ಆಕ್ಷನ್ ಮೂಲಕ ಮಿಂಚುವ ಯತ್ನ ಮಾಡಿದ್ದಾರೆ. ಬಲು ಸಮಯದ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿರುವ ಸಂಗೀತಾ ಭಟ್ ಗ್ಲಾಮರ್ ಮೂಲಕ ಗಮನ ಸೆಳೆಯುತ್ತಾರೆ. ಶೋಭ ರಾಜ್, ವೀಣಾ ಸುಂದರ್ ತಮ್ಮ ಪಾತ್ರಗಳಿಗೆ ಜೀವ ತುಂಬುವ ಯತ್ನ ಮಾಡಿದ್ದಾರೆ.
ಚಿತ್ರವನ್ನು ಸುಂದರ ಲೊಕೇಶನ್ ನಲ್ಲಿ ಸೆರೆ ಹಿಡಿಯಲಾಗಿದ್ದು ಇದು ಪ್ರೇಕ್ಷಕರಿಗೆ ಹಿತ ಅನಿಸುತ್ತದೆ. ಹೊಸಬರ ಚಿತ್ರವಾಗಿರುವ ಕ್ಲಾಂತ ಎಲ್ಲರೂ ಕುಳಿತುಕೊಂಡು ನೋಡುವ ಚಿತ್ರವಾಗಿ ಮೂಡಿ ಬಂದಿದೆ.
___
Be the first to comment