ಕಮಲ್ ಬೆಂಬಲಕ್ಕೆ ನಿಂತ ಕಿಶೋರ್

ನಟ ಕಮಲ್ ಹಾಸನ್ ಅವರ  ‘ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಎಂಬ ಹೇಳಿಕೆಗೆ  ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಬಹುಭಾಷಾ ನಟ ಕಿಶೋರ್ ಅವರು ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್‌ ಹೇಳಿಕೆಯನ್ನು ಅಷ್ಟೊಂದು ಭಾವುಕವಾಗಿ ನೋಡುವ ಅವಶ್ಯಕತೆ ಇಲ್ಲ.  ತಮಿಳಿಂದ ಕನ್ನಡ ಬಂದಿದೆ ಎಂದಾದರೆ ಸರಿ, ತಪ್ಪೇನಿಲ್ಲ. ಎಲ್ಲಾ ಭಾಷೆಗಳು ಎಲ್ಲಿಂದಲೋ ಹುಟ್ಟಿ ಬಂದಿರುತ್ತವೆ. ಹಾಗಂತ ಒಂದು ಭಾಷೆ ಮೇಲು, ಇನ್ನೊಂದು ಭಾಷೆ ಕೀಳು ಎಂಬುದಿಲ್ಲ. ಕನ್ನಡ ಎಲ್ಲಿಂದಲೋ ಹುಟ್ಟಿ ಬಂದಿದೆ. ಹಾಗೆಯೇ ತಮಿಳು ಸಹ ಎಲ್ಲಿಂದಲೂ ಹುಟ್ಟಿ ಬಂದಿದೆ. ಇಂತಹ ವಿಷಯದಲ್ಲಿ ಜನರನ್ನು ಭಾವುಕವಾಗಿ ರೊಚ್ಚಿಗೆಬ್ಬಿಸಬಾರದು ‘ ಎಂದರು.

‘ತಮಿಳಿನಿಂದ ಕನ್ನಡ ಬಂದಿದೆ ಎಂದಾದರೆ ಅದು ಸರಿ. ಅದರಲ್ಲಿ ತಪ್ಪೇನಿಲ್ಲ. ಭಾಷೆಗಳ ಬಗ್ಗೆ ಬಹಳಷ್ಟು ಸಿದ್ಧಾಂತಗಳಿವೆ. ಕೆಲವು ಭಾಷೆ ಎಲ್ಲಿಂದ ಬಂತು ಎಂಬ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ  ಸಂಶೋಧನೆಗಳು ನಡೆಯುತ್ತಲೇ ಇವೆ. ಭಾಷೆಯಿಂದ ಇನ್ನೊಂದು ಭಾಷೆ ಬಂದಿದೆ ಎಂದು ಹೇಳಿದರೆ ಅದನ್ನು ಅವಮಾನ ಎಂದು ಯಾಕೆ ಭಾವಿಸಬೇಕು?’ ಎಂದು ಪ್ರಶ್ನಿಸಿದ್ದಾರೆ.

‘ಕಮಲ್ ಹಾಸನ್ ಹೇಳಿರೋದು ಸಹ ಒಂದು ಥಿಯರಿ (ಸಿದ್ಧಾಂತ) ಇರಬಹುದು. ಅವರ ಥಿಯರಿ ಏನು ಎಂಬುದನ್ನು ತಿಳಿದುಕೊಳ್ಳೋಣ. ನನ್ನ ಅಭಿಪ್ರಾಯದಲ್ಲಿ ಅವರ ಹೇಳಿಕೆ ಅವಮಾನಕರವಲ್ಲ. ಈಗಾಗಲೇ ನಮ್ಮಲ್ಲಿ ಭಾಷೆ, ಜಾತಿ, ಧರ್ಮ ಎಲ್ಲವನ್ನೂ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಿಕೊಂಡಿದ್ದಾರೆ. ಭಾಷೆಯನ್ನು ಭಾವುಕತೆಯಿಂದ ನೋಡಬಾರದು. ಭಾಷೆಯನ್ನು ಭಾಷೆಯಾಗಿ ನೋಡಬೇಕು’ ಎಂದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!