ಇದೆ 17ಕ್ಕೆ ತೆರೆ ಮೇಲೆ ಬರುತ್ತಿದ್ದಾರೆ “ಕಿಲಾಡಿಗಳು”

ಸಿನಿಮಾ ಮೂಲಕ ಜನಸಾಮಾನ್ಯರನ್ನು ಜಾಗೃತಿಗೊಳಿಸುವಂತಹ ಕೆಲಸವನ್ನು ಮಾಡಲು ಹೊರಟಿದ್ದಾರೆ. ಹೌದು “ಕಿಲಾಡಿಗಳು” ಎಂಬ ಚಿತ್ರತಂಡ ಸಮಾಜದಲ್ಲಿ ದಿನನಿತ್ಯ ನಡೆಯುತ್ತಿರುವ ಮಕ್ಕಳ ಅಪಹರಣ ಹಾಗೂ ದುಷ್ಟರನ್ನು ಸದೆ ಬಡಿಯಲು ಪೊಲೀಸರ ಶ್ರಮದ ಕುರಿತಾದಂತ ಕಥಾನಕವನ್ನ ತೆರೆಮೇಲೆ ತರಲು ಮುಂದಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಚಿತ್ರ ಚಟುವಟಿಕೆಗಳು ಆರಂಭಗೊಂಡಿದ್ದು , ಚಿತ್ರಮಂದಿರಗಳತ್ತ ಜನ ಬರೋದು ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಚಿತ್ರಗಳು ಬಂದರೆ ಪ್ರೇಕ್ಷಕರು ಒಪ್ಪುತ್ತಾರೆ ಎಂಬ ಧೈರ್ಯದಿಂದ ಯುವ ನಿರ್ದೇಶಕ ಬಿ. ಪಿ. ಹರಿಹರನ್ ಕಥೆ , ಚಿತ್ರಕಥೆ , ಸಂಭಾಷಣೆ , ಸಾಹಿತ್ಯ , ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವ ಚಿತ್ರ ಕಿಲಾಡಿಗಳು.

ಇದೇ ತಿಂಗಳ 17ರಂದು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ನಿರ್ದೇಶಕ ಬಿ. ಪಿ. ಹರಿಹರನ್ ಪ್ರಕಾರ ಈ ಚಿತ್ರವು ಬಹಳ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದ್ದು , ಮಕ್ಕಳನ್ನು ಕಿಡ್ನಾಪ್ ಮಾಡಿ ಅವರ ಅಂಗಾಂಗಗಳನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡುವ ಜಾಲದ ವಿಚಾರವನ್ನು ಎಳೆ ಎಳೆಯಾಗಿ ತೆರೆದಿಡುವುದರ ಜೊತೆಗೆ ಈ ದುಷ್ಕೃತ್ಯ ಮಾಡುವ ಖದೀಮರ ಕಾರ್ಯತಂತ್ರವು ಚಿತ್ರದಲ್ಲಿ ತೋರಿಸಲಾಗಿದೆಯಂತೆ.

ಹಾಗೆಯೇ ಇಂಥಹ ದುಷ್ಟರನ್ನು ಸದೆಬಡಿಯಲು ಪೋಲಿಸರ ಕಾರ್ಯತಂತ್ರ ಮತ್ತು ಅವರ ಸಾಹಸವನ್ನು ಕೂಡ ಎತ್ತಿ ಹಿಡಿಯುವ ಕೆಲಸವನ್ನು ಈ ಚಿತ್ರದಲ್ಲಿ ಮಾಡಲಾಗಿದೆಯoತೆ. ಈ ತಂಡದ ಪ್ರಕಾರ ಈ ಕಿಲಾಡಿಗಳು ಚಿತ್ರವನ್ನು ಪೋಲಿಸರಿಗೆ ಅರ್ಪಿಸಿದೆಯಂತೆ.

ಪೊಲೀಸರ ಕುರಿತಾದ ಹಾಡುಗಳು ಈ ಚಿತ್ರದಲ್ಲಿ ಇರುವುದು ಮತ್ತೊಂದು ವಿಶೇಷ. ಆನಂದ ಸಿನಿಮಾಸ್ ಅವರ ಈ “ಕಿಲಾಡಿಗಳು” ಚಿತ್ರವನ್ನ ಮಹೇಂದ್ರ ಮುಣೋತ್ ನಿರ್ಮಿಸಿ ಜೊತೆಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದಕ್ಷ ಅಧಿಕಾರಿಯಾಗಿ ಮಕ್ಕಳನ್ನ ರಕ್ಷಿಸಿ , ದುಷ್ಟರನ್ನು ಸದೆಬಡಿಯುವ ಪಾತ್ರವನ್ನು ನಿರ್ವಹಿಸಿದ್ದಾರಂತೆ.

ಸದಾ ಜನರನ್ನು ಜಾಗೃತಿ ಮೂಡಿಸುವ ಕೆಲಸದಲ್ಲಿ ನಾನು ನಿರತನಾಗಿರುತ್ತೇನೆ ಎನ್ನುವ ಮಹೇಂದ್ರ ಅವರ ವ್ಯಕ್ತಿತ್ವಕ್ಕೆ ತಕ್ಕಂತಹ ಪಾತ್ರ ಸಿಕ್ಕಿದೆ ಎನ್ನಬಹುದು. ಇನ್ನು ಈ ಚಿತ್ರದಲ್ಲಿ ಹಿರಿಯ ನಟ ಗುರುರಾಜ್ ಹೊಸಕೋಟೆ ಪೊಲೀಸ್ ಅಧಿಕಾರಿಯಾಗಿದ್ದು , ನಿರ್ದೇಶಕ ಬಿ. ಪಿ. ಹರಿಹರನ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ಉಳಿದಂತೆ ಪುಟಾಣಿ ಮಕ್ಕಳು ಕೂಡ ತಮ್ಮ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರಂತೆ. ಈ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ ನೀಡಿದ್ದು , ಡಾ. ವಿ. ನಾಗೇಂದ್ರ ಪ್ರಸಾದ್ ಹಾಗೂ ಹೃದಯಶಿವ ಹಾಡುಗಳನ್ನು ಬರೆದಿದ್ದಾರೆ. ಇನ್ನು ನಿರಂಜನ್ , ಜಾನ್ ಹಾಗೂ ಸೂರ್ಯೋದಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು , ವೀರಾಂಜನೇಯ ವಿಜಯ ಮೂವೀಸ್ ಥ್ರೂ ಆನಂದ ಸಿನಿಮಾಸ್ ಈ ಚಿತ್ರವನ್ನು ಹೊರತರುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!