ಯಶ್ ನಟನೆಯ ಕೆಜಿಎಫ್ 2 ಚಿತ್ರ ಮೊದಲ ದಿನ ಎಲ್ಲಾ ಭಾಷೆಗಳನ್ನು ಸೇರಿ ಒಟ್ಟು 130 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗಿದೆ.
ಹಿಂದಿ ಅವತರಣಿಕೆಯೊಂದರಲ್ಲೇ ಮೊದಲ ದಿನವೇ 50 ಕೋಟಿ ರೂ. ಗಳಿಕೆ ಆಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಾಕ್ಸ್ ಆಫೀಸ್ ದಾಖಲೆ ನಿರ್ಮಾಣ ಆಗುವ ನಿರೀಕ್ಷೆ ಹೊಂದಲಾಗಿದೆ.
ಕನ್ನಡ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಹಿಂದಿಯಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಾಲು ಸಾಲು ರಜೆ ಇರುವ ಕಾರಣ ಜನರು ಥಿಯೇಟರ್ ಕಡೆಗೆ ಬರುವ ನಿರೀಕ್ಷೆ ಇದೆ.
ಸಿನಿಮಾ ಇಡೀ ಜಗತ್ತಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ. ಮುಂಗಡ ಟಿಕೆಟ್ ಮಾರಾಟದಲ್ಲಿ ಮುಂಬೈನಲ್ಲಿ ‘RRR’ ಸಿನಿಮಾದ ದಾಖಲೆ ಮುರಿಯುವಲ್ಲಿ ‘ಕೆಜಿಎಫ್ 2’ ಸಿನಿಮಾ ಯಶಸ್ವಿ ಆಗಿದೆ.
ತೆಲಂಗಾಣ ಸರ್ಕಾರ ತೆಲುಗು ದೊಡ್ಡ ಬಜೆಟ್ ಸಿನಿಮಾಗಳಂತೆ ‘ಕೆಜಿಎಫ್ 2’ ಚಿತ್ರವನ್ನು ದಿನಕ್ಕೆ ಐದು ಪ್ರದರ್ಶನ ಮಾಡಲು ಅನುಮತಿಯನ್ನು ನೀಡಿದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ 50 ರೂ. ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 30 ರೂ. ಟಿಕೆಟ್ ದರ ಏರಿಸಲು ಅವಕಾಶವನ್ನು ಅಲ್ಲಿನ ಸರ್ಕಾರ ನೀಡಿದೆ.
ಹೈದರಾಬಾದ್‌ನಲ್ಲಿ ಸಿಂಗಲ್ ಸ್ಕ್ರೀನ್‌ಗಳಲ್ಲಿ ‘ಕೆಜಿಎಫ್ 2’ ಸಿನಿಮಾದ ಟಿಕೆಟ್ ದರ ಬಾಲ್ಕನಿಗೆ 210 ರೂ., ಇತರೆ ಕ್ಲಾಸ್ 150 ರೂ. ಇದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ಬೆಲೆ ಜಾಸ್ತಿ ನಿಗದಿ ಮಾಡಲಾಗಿದೆ. ದಿನಕ್ಕೆ ಐದು ಶೋ ಇರುವ ಕಾರಣ ಹೆಚ್ಚು ಕಲೆಕ್ಷನ್ ಆಗುವ ವಿಶ್ವಾಸವಿದೆ. ತೆಲಂಗಾಣದಲ್ಲಿ ‘ಕೆಜಿಎಫ್ 2’ ಉತ್ತಮ ಲಾಭ ಪಡೆಯಲಿದೆ ಎನ್ನಲಾಗಿದೆ.
ಆಂಧ್ರದಲ್ಲಿ ದೊಡ್ಡ ಬಜೆಟ್ ಸಿನಿಮಾಗಳಿಗೆ ಟಿಕೆಟ್ ದರ ಏರಿಸಿಕೊಳ್ಳುವ ಅವಕಾಶ ಇದೆಯಾದರೂ, ಸರ್ಕಾರ ‘ಕೆಜಿಎಫ್ 2’ಗೆ ಟಿಕೆಟ್ ದರ ಏರಿಸಲು ಅವಕಾಶ ಇನ್ನೂ ನೀಡಿಲ್ಲ.
ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.
ಇದೇ ವೇಳೆ ಚಿತ್ರತಂಡ ಪೈರಸಿ ಕಂಡು ಬಂದರೆ ಈ ಬಗ್ಗೆ ದೂರು ನೀಡುವಂತೆ ಕೋರಿದೆ.
___
Be the first to comment