ಥಿಯೇಟರಿಗೆ ಬರಲು ಸಿದ್ಧವಾಗುತ್ತಿರುವ ಕೆಜಿಎಫ್ ಚಿತ್ರದ ಚಾಪ್ಟರ್ 2 ಟೀಸರ್ ಬಿಡುಗಡೆ ಆಗಿ ಎಲ್ಲ ಕಡೆ ಥೇಟು ತನ್ನ ವಿಶುವಲ್ಸ್ ನಂತೆ ಧೂಳೆಬ್ಬಿಸುತ್ತಿದೆ. ಆದರೆ ಈ ಧೂಳಿಗಿಂತ ಹೆಚ್ಚು ಸುದ್ದಿ ಮಾಡ್ತಾ ಇರೋದು ಹೊಗೆ. ಹೌದು. ಚಿತ್ರದ ಟೀಸರ್ ನಲ್ಲಿ ನಾಯಕ ಯಶ್ ಕೆಂಡದ ಬದಲು ಬಂದೂಕಿನ ನಳಿಕೆಯಿಂದ ಸಿಗರೇಟು ಹಚ್ಚಿಕೊಳ್ಳುವುದನ್ನು ನೋಡಿದ ಕರ್ನಾಟಕ ಸರ್ಕಾರ ಈಗ ಕೆಂಡ ಕಾರುತ್ತಿದೆ. ಅಂದ್ರೆ ಸರ್ಕಾರದ ಲೆವೆಲ್ ನಲ್ಲೂ ಈ ಬಗ್ಗೆ ಚರ್ಚೆ ಆಗಿದೆ ಅಂತ ಅರ್ಥ. ಆರೋಗ್ಯ ಸಚಿವರು ಈ ಬಗ್ಗೆ ಮಾತನಾಡಿ ಸಿನಿಮಾ ನಟರು ಜನರಿಗೆ ಆದರ್ಶವಾಗಬೇಕು. ಯಾಕಂದ್ರೆ ಜನ ಅವರನ್ನು ಅನುಕರಿಸುತ್ತಾರೆ ಎಂದಿದ್ದಾರೆ. ಆದರೆ ಸರ್ಕಾರ ಮತ್ತು ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಸರಿಯಾದ ಮಾನದಂಡ ಮತ್ತು ಕ್ರಮಗಳನ್ನು ಅನುಸರಿಸುತ್ತಿದೆಯೇ ಎಂಬ ಅನುಮಾನ ಈಗ ಎಲ್ಲರನ್ನೂ ಕಾಡುತ್ತಿದೆ.
ಯಾಕೆಂದರೆ ಕೆಜಿಎಫ್ ಈ ರೀತಿ ಸಿಗರೇಟಿನ ವೈಭವೀಕರಣ ಮಾಡುತ್ತಿರುವ ಮೊದಲ ಚಿತ್ರವೇನಲ್ಲ.
ಈಗಿನ ಅನೇಕ ಮಾಸ್ ಚಿತ್ರಗಳಲ್ಲಿ ಇದು ಕಾಮನ್. ಎಲ್ಲ ಹೀರೋಗಳೂ ತಮ್ಮ ಹೀರೋಯಿಸಂ ಅನ್ನು ತೋರಿಸಲು ಪ್ರಮುಖವಾಗಿ ಬಳಸುವುದು ಸಿಗರೇಟನ್ನೇ. ಅದೇನೋ ಸಿಗರೇಟು ಹಚ್ಚಿದರೆ ನಾಯಕನಿಗೆ ಒಂದು ಮ್ಯಾನ್ಲಿ ಹೀರೋಯಿಸಂ ಬಂದುಬಿಡುತ್ತದೆ ಎಂಬುದು ಸಿನಿಮಾ ಮೇಕರ್ ಗಳ ಅನಿಸಿಕೆ. ಹಾಗಾಗಿ ಈ ಚಿತ್ರದಲ್ಲೂ ಕಿಂಗ್ ಮೇಕರ್ ಎನಿಸಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್ ನಾಯಕ ಯಶ್ ಅವರ ಬಾಯಿಗೆ ಕಿಂಗ್ ಅನ್ನೇ ಇಟ್ಟಿದ್ದಾರೆ. ಆದರೆ ಇದು ಈಗ ಸರ್ಕಾರದ ಬಾಯಿಗೂ ಆಡಿಕೊಳ್ಳಲು ಅವಕಾಶ ಕೊಟ್ಟಂತಾಗಿದೆ.
ಈ ರೀತಿ ದೂಷಿಸಲು ಅವರುಗಳು ಕೊಡುತ್ತಿರುವ ಕಾರಣ, ಟೀಸರ್ ನ ಸಿಗರೇಟು ಸೇದುವ ದೃಶ್ಯದಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ತೋರಿಸಲಾಗಿಲ್ಲ ಎನ್ನುವುದು. ಅದು ಸತ್ಯವೇ. ಆದರೆ ಹಾಗಂತ ಟೀಸರ್ ನಲ್ಲಿ ಹಾಕಿಲ್ಲ, ಸಿನಿಮಾದಲ್ಲಿ ಹಾಕಲೇಬೇಕು ಎಂದು ತಾಕೀತು ಮಾಡಿದ್ದರೆ ಎಲ್ಲ ಸರಿಯಾಗುತ್ತಿತ್ತು. ಆದರೆ ಆ ದೃಶ್ಯಕ್ಕೇ ಕತ್ತರಿ ಹಾಕಬೇಕು ಅಂತ ಆರೋಗ್ಯ ಸಚಿವ ಸುಧಾಕರ್ ಹಠ ಹಿಡಿದಿರೋದು ಆಶ್ಚರ್ಯ ಮೂಡಿಸಿದೆ.
ಅಷ್ಟಕ್ಕೂ ಯಾವ ಚಿತ್ರದಲ್ಲೂ ತೋರಿಸದೇ ಇರುವುದನ್ನೇನೂ ಕೆಜಿಎಫ್ ಚಿತ್ರದಲ್ಲಿ ತೋರಿಸಿಲ್ಲ. ಚಿತ್ರದ ತುಂಬಾ ವಿಲ್ಲನ್ ಗಳ ವಿರುದ್ಧ ಹಗೆ ಸಾಧಿಸುವ ನಾಯಕ ಟೀಸರ್ ನಲ್ಲಿ ಸ್ವಲ್ಪ ಹೊಗೆ ಹಾಕಿದ್ದಾರೆ. ಹೆಂಗಿದ್ರೂ ಸಿನಿಮಾ ತುಂಬಾ ಧೂಳಿದೆ. ಅದರ ಜೊತೆ ಒಂದ್ ಸ್ವಲ್ಪ ಹೊಗೆ ಇದೆ. ಹೋಗ್ಲಿ ಬಿಡಿ ಅಂದ್ಕೊಂಡು ಸುಮ್ನೆ ಆಗಬಹುದಿತ್ತು. ಆದರೆ ಅದು ಹಾಗಾಗಿಲ್ಲ.
ಈ ನಿಟ್ಟಿನಲ್ಲಿ ಯೋಚನೆ ಮಾಡಿದರೆ ಈ ವಿವಾದಕ್ಕೆ ಇನ್ನೊಂದು ಇಂಥದೇ ವಿವಾದದ ಹೋಲಿಕೆ ಇದೆ.
ಕೆಜಿಎಫ್ ಚಿತ್ರದಲ್ಲಿ ಪ್ರಕಾಶ್ ರೈ ಇದ್ದಾರೆ, ಅದಕ್ಕೇ ನಾವು ಸಿನಿಮಾ ನೋಡಲ್ಲ ಅಂತ ಕೆಲವು ಬಿಜೆಪಿ ಬೆಂಬಲಿಗರು ಬೆದರಿಕೆ ಹಾಕಿದ್ದರು. ಅವರನ್ನು ಪ್ರಶ್ನೆ ಮಾಡುವುದಾದರೆ, ಪ್ರಕಾಶ್ ರೈ ಕೆಜಿಎಫ್ ಬಿಟ್ಟು ಇನ್ಯಾವ ಚಿತ್ರಗಳಲ್ಲೂ ಅಭಿನಯಿಸುತ್ತಿಲ್ಲವೇ? ಹಾಗಾದರೆ, ಪ್ರಕಾಶ್ ರೈ ಅಭಿನಯದ ಉಳಿದ ಚಿತ್ರಗಳ ಬಗ್ಗೆ ಯಾಕೆ ಯಾರೂ ತಕರಾರು ಎತ್ತುತ್ತಿಲ್ಲ ಎಂದು ಯಾರಿಗಾದರೂ ಅನಿಸುತ್ತದೆ. ಅದೇ ರೀತಿ ಸೆನ್ಸಾರ್ ಮಂಡಳಿ ಸಿಗರೇಟಿನ ಬಗ್ಗೆ ತಕರಾರು ಎತ್ತಿರುವುದು ನೋಡಿದರೆ, ಕೆಜಿಎಫ್ ಬಿಟ್ಟು ಇನ್ಯಾವ ಚಿತ್ರಗಳಲ್ಲೂ ಸಿಗರೇಟು ಸೇದುವುದನ್ನು ತೋರಿಸಿಯೇ ಇಲ್ಲವೇ ಎಂದು ಸಿನಿಪ್ರೇಮಿಗಳು ಸಹಜವಾಗಿಯೇ ಕೇಳುತ್ತಿದ್ದಾರೆ. ಇಲ್ಲಿ ಎರಡೂ ವಿಷಯಕ್ಕೆ ಒಂದೇ ಉತ್ತರ ಅಂದ್ರೆ ಅದು ತಪ್ಪಲ್ಲ. ಕೆಜಿಎಫ್ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಸಿನಿಮಾ. ಹಾಗಾಗಿಯೇ ಅದರ ಬಗ್ಗೆ ಅನವಶ್ಯಕ ತಕರಾರುಗಳನ್ನು ಎತ್ತಲಾಗುತ್ತಿದೆ ಎಂದು ಯಾರಿಗಾದರೂ ಎನಿಸಿದರೆ ಅದರಲ್ಲಿ ತಪ್ಪಿಲ್ಲ. ಆದರೆ, ಇದೀಗ ಕೆಜಿಎಫ್ ಚಿತ್ರದ ಮೇಲೆ ಸರ್ಕಾರ ಮತ್ತು ಸೆನ್ಸಾರ್ ಮಂಡಳಿ ಕೆಂಡಕಾರುತ್ತಿರೋದು ನೋಡಿ ಅದೇ ಬೆಂಕಿಯಲ್ಲಿ ಕೆಲವರು ಬೇಳೆ ಬೇಯಿಸಿಕೊಳ್ಳಲು ಯೋಚನೆ ಮಾಡುತ್ತಿರೋದಂತೂ ಸುಳ್ಳಲ್ಲ.
-ಹರಿ ಪರಾಕ್
Be the first to comment