ನಿರ್ದೇಶಕ: ಸಹದೇವ್ ಕಳೆವಡಿ
ನಿರ್ಮಾಪಕ: ರೂಪಾ ರಾವ್
ತಾರಾಗಣ: ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲಾ, ಗೋಪಾಲಕೃಷ್ಣ ದೇಶಪಾಂಡೆ ಇತರರು
ರೇಟಿಂಗ್: 3.5/ 5
ರಾಜಕೀಯ ಕ್ಷೇತ್ರದಲ್ಲಿ ಯಾವ ರೀತಿ ಮುಖವಾಡ ಹಾಕಿಕೊಂಡು ಸಾಮಾನ್ಯ ಜನರನ್ನು ಬಳಸಿಕೊಳ್ಳಲಾಗುತ್ತದೆ ಎಂದು ವಿಡಂಬನಾತ್ಮಕವಾಗಿ ಹೇಳುವ ಚಿತ್ರ ಈ ವಾರ ತೆರೆಗೆ ಬಂದಿರುವ ಕೆಂಡ!
ಚಿತ್ರವನ್ನು ನೋಡಿದಾಗ ಇದು ಸುಮಾರು ಎರಡು ದಶಕದ ಹಿಂದಿನ ಕಥೆ ಎಂದು ಗೊತ್ತಾಗುತ್ತದೆ. ಕನ್ನಡದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಇದ್ದ ವೇಳೆ ಆಗಿನ ಸಂಪಾದಕ ಯಾವ ರೀತಿ ಸಾಮಾನ್ಯ ಜನರನ್ನು ಕಲ್ಲು ಹೊಡೆಸುವ, ಗಲಾಟೆ ಮಾಡಿಸುವ ಕಾರ್ಯದಲ್ಲಿ ಬಳಸಿಕೊಂಡ ಎನ್ನುವ ವಿಚಾರ ಚಿತ್ರದಲ್ಲಿದೆ. ರಾಜಕೀಯದ ಬಲೆಗೆ ಸಿಕ್ಕಿ ನಾನು ತಪ್ಪು ಮಾಡುತ್ತಿದ್ದೇನೆ ಎನ್ನುವುದನ್ನು ಅರಿತ ವ್ಯಕ್ತಿ ಆ ನಂತರ ಯಾವ ಹೆಜ್ಜೆ ಇಡುತ್ತಾನೆ ಎನ್ನುವುದು ಚಿತ್ರದ ಕಥೆಯಾಗಿದೆ.
ಈ ಹಿಂದೆ ಗಂಟು ಮೂಟೆ ಚಿತ್ರ ನಿರ್ಮಿಸಿದ್ದ ರೂಪ ರಾವ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಸಹದೇವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಗಂಭೀರವಾಗಿದ್ದು, ಮನರಂಜನೆ ನಿರೀಕ್ಷಿಸುವವರಿಗೆ ಇದು ನೋಡಲು ಕಷ್ಟವಾಗಬಹುದು. ಬುದ್ಧಿವಂತರಿಗೆ ಈ ಚಿತ್ರದ ಸೂಕ್ಷ್ಮತೆಗಳು ಅರ್ಥವಾಗುತ್ತವೆ. ಜನಸಾಮಾನ್ಯರಿಗೆ ಇದು ನಿಲುಕುವುದು ಕಷ್ಟ ಆಗಬಹುದು.
ಚಿತ್ರದಲ್ಲಿ ಹಿಂಸೆ, ಕ್ರೌರ್ಯ ಇಲ್ಲ. ಆದರೆ ಅಶ್ಲೀಲ ಪದಗಳ ಬಳಕೆ ಮಾಡಲಾಗಿದೆ. ಇದು ಸಬ್ ಟೈಟಲ್ ನಲ್ಲೂ ಇದೆ. ಇದು ಸೆನ್ಸಾರ್ ಪಾಸ್ ಆಗಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ.
ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಿನ್ನೆಲೆ ಸಂಗೀತ ಚೆನ್ನಾಗಿದೆ. ಚಿತ್ರವನ್ನು ಸ್ವಲ್ಪ ಮೊಟಕುಗೊಳಿಸಿದಲ್ಲಿ ನೋಡುಗರಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು.
____
Be the first to comment