ಚಿತ್ರ: ಕೇದಾರ್ನಾಥ್ ಕುರಿಫಾರಂ
ನಿರ್ದೇಶನ: ಶೀನು ಸಾಗರ್
ನಿರ್ಮಾಣ: ಜೆ.ಕೆ.ಮೂವೀಸ್, ನಟರಾಜ್. ಕೆ.ಎಂ
ತಾರಾಗಣ: ಮಡೆನೂರು ಮನು, ಶಿವಾನಿ, ಕರಿಸುಬ್ಬು, ಟೆನ್ನಿಸ್ ಕೃಷ್ಣ, ಮುತ್ತು
ರೇಟಿಂಗ್: 3.5/5
ಜೆ.ಕೆ. ಮೂವೀಸ್ ಬ್ಯಾನರ್ನಲ್ಲಿ ಮೂಡಿಬಂದಿರುವ ‘ಕೇದಾರನಾಥ್ ಕುರಿ ಫಾರಂ’ ಗ್ರಾಮೀಣ ಜೀವನದ ಸೊಗಡು ಮತ್ತು ಹಾಸ್ಯವನ್ನು ಸಮತೋಲನಗೊಳಿಸಿರುವ ಒಂದು ರೋಚಕ ಚಿತ್ರವಾಗಿದೆ. ನಿರ್ದೇಶಕ ಸೀನು ಸಾಗರ್ ಅವರು ನಶೆ ಮತ್ತು ಆಸೆಗಳು ಮಾನವನ ಜೀವನದ ಮೇಲೆ ಬೀರುವ ಪ್ರಭಾವವನ್ನು ಕುರಿತು ಒಂದು ಆಸಕ್ತಿದಾಯಕ ಕಥೆಯನ್ನು ಹೇಳಿದ್ದಾರೆ.
ಕುರಿ ಫಾರಂನಲ್ಲಿ ನಡೆಯುವ ಈ ಕಥೆಯಲ್ಲಿ, ನಾಯಕ ಮಂಜು (ಮಡೆನೂರು ಮನು) ತನ್ನ ಗೆಳೆಯರೊಂದಿಗೆ ಕುಡಿದು ಮಸ್ತಿ ಮಾಡುತ್ತಾ ಕಾಲ ಕಳೆಯುತ್ತಿರುತ್ತಾನೆ. ಆದರೆ ಒಂದು ಸುಂದರವಾದ ಯುವತಿಯ ಆಗಮನದಿಂದ ಅವನ ಜೀವನದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗುತ್ತದೆ. ಇಬ್ಬರ ನಡುವೆ ಪ್ರೇಮಾಂಕುರವಾಗುವ ಹೊತ್ತಿಗೆ, ನಾಯಕಿಯ ತಂದೆಯ ಸಾವು ಕಥೆಗೆ ಒಂದು ತಿರುವು ನೀಡುತ್ತದೆ.
ಕೊಲೆ, ರಹಸ್ಯಗಳು ಮತ್ತು ಪೊಲೀಸ್ ತನಿಖೆಗಳು ಕಥೆಯನ್ನು ಹೆಚ್ಚು ರೋಚಕಗೊಳಿಸುತ್ತವೆ. ಗ್ರಾಮೀಣ ಭಾಗದ ಯುವಕರ ಜೀವನ ಶೈಲಿ, ಪ್ರೀತಿ, ಕುಟುಂಬದ ಬಂಧ ಮತ್ತು ಸಮಾಜದ ಕೆಲವು ಸಮಸ್ಯೆಗಳನ್ನು ಚಿತ್ರವು ಪ್ರಸ್ತುತಪಡಿಸುತ್ತದೆ.
ಚಿತ್ರದಲ್ಲಿ ಗ್ರಾಮೀಣ ಜೀವನದ ಸೊಗಡು ಮತ್ತು ಹಾಸ್ಯದ ಸನ್ನಿವೇಶಗಳು ಪ್ರೇಕ್ಷಕರನ್ನು ರಂಜಿಸುತ್ತವೆ. ಕಥೆಯಲ್ಲಿ ಹಲವಾರು ತಿರುವುಗಳು ಇರುವುದರಿಂದ ಪ್ರೇಕ್ಷಕರು ಕೊನೆಯವರೆಗೂ ಕುತೂಹಲದಿಂದ ಇರುತ್ತಾರೆ. ಕೆಲವೆಡೆ ಡಬಲ್ ಮೀನಿಂಗ್ ಸಂಭಾಷಣೆಗಳಿದ್ದರೂ, ಅವು ಕಥೆಗೆ ಪೂರಕವಾಗಿವೆ. ಮಡೆನೂರು ಮನು ಸೇರಿದಂತೆ ಎಲ್ಲಾ ನಟರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಸಣ್ಣಪುಟ್ಟ ಕೊರತೆಗಳನ್ನು ಬದಿಗಿಟ್ಟು ನೋಡಿದರೆ, ‘ಕೇದಾರನಾಥ್ ಕುರಿ ಫಾರಂ’ ಕುಟುಂಬ ಸಮೇತವಾಗಿ ಕುಳಿತು ನೋಡಬಹುದಾದ ಚಿತ್ರವಾಗಿದೆ.
Be the first to comment