ಧ್ರುವ ಸರ್ಜಾ ನಟನೆಯ ‘ಕೆಡಿ- ದಿ ಡೆವಿಲ್’ ಚಿತ್ರದ ಆಡಿಯೋ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆ.
ಆನಂದ್ ಆಡಿಯೋ 17.70 ಕೋಟಿ ರೂ. ಗಳಿಗೆ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಇದು ಕನ್ನಡ ಚಿತ್ರರಂಗದಲ್ಲಿಯೇ ಮೈಲಿಗಲ್ಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್‌ನ ವ್ಯವಹಾರ ಮತ್ತು ಕಾರ್ಯಾಚರಣೆಗಳ ಮುಖ್ಯಸ್ಥ ಸುಪ್ರಿತ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಯೋಜಿಸಿರುವ ಕೆಡಿ ಸಿನಿಮಾದಲ್ಲಿ ಆರು ಹಾಡುಗಳಿವೆ. ಆರಂಭಿಕ ಮೆಲೋಡಿಗಳು ಮೈಸೂರಿನಲ್ಲಿ ಹುಟ್ಟಿದ್ದರೂ, ಬುಡಾಪೆಸ್ಟ್‌ನಲ್ಲಿ ಸುಮಾರು 256 ಸಂಗೀತಗಾರರು ಒಗ್ಗೂಡಿ ಚಿತ್ರಕ್ಕೆ ಸಂಗೀತ ರಚಿಸಿದ್ದಾರೆ. ಶಿವಮಣಿ ಅವರಲ್ಲದೆ ಜಾಕಿರ್ ಹುಸೇನ್ ಅವರ ಸಹೋದರ ತೌಫಿಕ್ ಖುರೇಷಿ ಜೊತೆಗೆ ರಿದಮ್‌ನಲ್ಲಿ 60 ಸಂಗೀತಗಾರರು ಕೆಲಸ ಮಾಡಿದ್ದಾರೆ. ಈ ಸಾಧನೆ ಶಾರುಖ್ ಖಾನ್ ಅವರ ‘ಪಠಾನ್’ ನಿರ್ಮಿಸಿದ 180 ಸಂಗೀತಗಾರರ ದಾಖಲೆಯನ್ನು ಮೀರಿಸಿದೆ.
‘ಕೆಡಿ’ ಚಿತ್ರ ಡಿಸೆಂಬರ್‌ನಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.
ವೆಂಕಟ್ ಕೋಣಂಕಿ ನಾರಾಯಣ ನಿರ್ಮಿಸಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಜೊತೆಗೆ ವಿ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ ಇದೆ.
150 ದಿನಗಳ ಚಿತ್ರೀಕರಣ ಮುಗಿಸಿರುವ ‘ಕೆಡಿ’ ಚಿತ್ರದ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಕೆಲವು ಪ್ಯಾಚ್‌ವರ್ಕ್ ಮತ್ತು ಕೆಲ ಹಾಡುಗಳ ಸೀಕ್ವೆನ್ಸ್‌ಗಳ ಚಿತ್ರೀಕರಣ ಬಾಕಿ ಉಳಿದಿದೆ.
Be the first to comment