ಸರ್ಕಾರ ಜನಸಾಮಾನ್ಯರ ಬದುಕಿಗೆ ಯಾವ ವ್ಯವಸ್ಥೆಗಳನ್ನು ಕೂಡ ಮಾಡದೆ ದಿಢೀರನೆ ಲಾಕ್ಡೌನ್ ಹೇರುತ್ತದೆ. ಆದರೆ ಅದು ಎಷ್ಟೊಂದು ಭಯಾನಕ ಪರಿಸ್ಥಿತಿ ನಿರ್ಮಿಸುತ್ತದೆ ಎನ್ನುವುದನ್ನು ಹೃದ್ಯವಾಗಿ ತೋರಿಸಿರುವ ಕಿರುಚಿತ್ರ ‘ಕತೆಯಲ್ಲ ಜೀವನ’.
ಬೆಂಗಳೂರಿನಂಥ ನಗದರಲ್ಲಿರುವವರು ದಿಢೀರ್ ಲಾಕ್ಡೌನ್ ನಿಂದ ಎದುರಿಸುವ ಸಮಸ್ಯೆಗಳು ಹಲವು. ಮೊದಲನೆಯದಾಗಿ ಮನೆಯ ಯಜಮಾನನಿಗೆ ಕೆಲಸ ಇರುವುದಿಲ್ಲ. ದುಡಿಮೆಗೆಂದು ಬೆಂಗಳೂರು ಸೇರಿಕೊಂಡವರು ಅದೆಷ್ಟೇ ಕೂಡಿಟ್ಟುಕೊಂಡಿದ್ದರೂ ತಿಂಗಳ ಕಂತು ಕಟ್ಟುವುದರಲ್ಲಿ ಕೈ ಖಾಲಿಯಾಗಿ ಬಿಡುತ್ತದೆ ಎನ್ನುವುದು ಹಲವರ ಅನುಭವದ ಮಾತು. ಅಂಥದ್ದರಲ್ಲಿ ಒಬ್ಬ ಮಹಿಳೆ ತನ್ನ ಮಗುವಿನೊಡನೆ ಲಾಕ್ಡೌನ್ ದಿನಗಳನ್ನು ಹೇಗೆ ಕಳೆಯುತ್ತಾರೆ ಮತ್ತು ಮಾನವೀಯತೆಯ ದೃಷ್ಟಿಯಿಂದ ಕಂಡರೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತದೆ ಎನ್ನುವುದನ್ನು ಕಿರುಚಿತ್ರದಲ್ಲಿ ತೋರಿಸಲಾಗಿದೆ.
ದುಡಿಯುವ ಮನಸ್ಸಿದ್ದರೂ ದುಡಿಸಿಕೊಳ್ಳದ ಸಂಸ್ಥೆ ಅರ್ಧ ಸಂಬಳವನ್ನು ಕೂಡ ನೀಡುವುದಿಲ್ಲ. ಅದೇ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ ಹೆಸರಲ್ಲಿ ಶಾಲೆಗಳು ಮಕ್ಕಳ ಫೀಸು ಪಡೆಯಲು ತುದಿಗಾಲಲ್ಲಿ ನಿಂತಿರುತ್ತದೆ. ಇದರ ನಡುವೆ ಬಾಡಿಗೆ ನೀಡದಿದ್ದರೆ ಮನೆ ಖಾಲಿ ಮಾಡುವಂತೆ ಒತ್ತಡ! ಇಂಥ ಸಂದರ್ಭದಲ್ಲಿ ಆಕೆ ಕೈಗೊಳ್ಳುವ ನಿರ್ಧಾರವೇನು? ಮಗುವಿನ ಮನಸ್ಸು ಎಂಥದ್ದು? ಮನೆ ಮಾಲೀಕನ ಹೃದಯಕಲ ಕರಗುವುದು ಯಾಕೆ ಮೊದಲಾದ ವಿಚಾರಗಳನ್ನು ದೃಶ್ಯದ ಮೂಲಕ ಸೆರೆ ಹಿಡಿಯಲಾಗಿದೆ.
ಸಿನಿಮಾ ಏಳೆಂಟು ನಿಮಿಷಗಳಲ್ಲಿ ಮುಗಿದರೂ ನೂರೆಂಟು ಕಾಲ ಮನದಲ್ಲಿ ಉಳಿಯುವಂತಿದೆ. ಅದಕ್ಕೆ ಕಾರಣ ಕತೆ ಮತ್ತು ಕಲಾವಿದರ ನಟನೆ ಎನ್ನುವುದನ್ನು ಉಲ್ಲೇಖಿಸಲೇಬೇಕು.
ನಿರ್ದೇಶಕ ಪುನೀತ್ ಅವರಿಂದ ಮೂಡಿ ಬಂದಿರುವ ಈ ಕಿರುಚಿತ್ರದ ನಿರ್ಮಾಣ ಮಾಡುವ ಜೊತೆಗೆ ಒಂದು ಪುಟ್ಟ ಪಾತ್ರದಲ್ಲಿಯೂ ಕಾಣಿಸಿದ್ದಾರೆ ‘ಸೂಪರ್ ಸ್ಟಾರ್ಸ್’ ಮಾಸಿಕದ ಅಸ್ಲಾಂ. ಕಷ್ಟಪಡುವ ಮಹಿಳೆಯ ಪಾತ್ರಕ್ಕೆ ನಟಿ ವಿದ್ಯಾ ವಿಜಯ್ ಅವರು ಜೀವ ತುಂಬಿದ್ದರೆ, ಪುರ್ತಿಯಾಗಿ ಯಶಿಕಾ ಪ್ರಸಾದ್ ನಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ‘ರಂಗಿತರಂಗ’ ಖ್ಯಾತಿಯ ಅರವಿಂದ್ ರಾವ್ ಅವರ ಸಹಜ ನಟನೆಯನ್ನು ಮೆಚ್ಚಲೇಬೇಕು. ಅವರ ಅಭಿನಯವೇ ಈ ಕಿರುಚಿತ್ರದ ಜೀವಾಳ ಎನ್ನಬಹುದು. ಅದೇ ರೀತಿ ಜನಪ್ರಿಯ ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಪುರುಷೋತ್ತಮ್ ಅವರ ಸಂಕಲನ ಈ ಕಿರುಚಿತ್ರಕ್ಕಿದೆ. ಚಿತ್ರ ನೋಡಿದವರು ಇದರಿಂದ ಪ್ರಭಾವಿತರಾಗಿ ಹೆಚ್ಚು ಸಾಮಾಜಿಕ ಕಾಳಜಿಯುಳ್ಳ ಪ್ರಜೆಗಳಾದರೆ ‘ಕತೆಯಲ್ಲ ಜೀವನ’ ಕಿರುಚಿತ್ರದ ಪ್ರಯತ್ನ ಯಶಸ್ವಿಯಾದಂತೆ ಎನ್ನುವುದು ತಂಡದ ಅಭಿಪ್ರಾಯ. ಇಂಥದೊಂದು ಉತ್ತಮ ಪ್ರಯತ್ನಕ್ಕೆ ಬಿ.ಸಿನಿಮಾಸ್ ಅಭಿನಂದಿಸುತ್ತದೆ.
ಸಿನಿಮಾ ನೋಡಲು ಈ ಲಿಂಕ್ ನೋಡಿ
Be the first to comment