ಚಿತ್ರ ವಿಮರ್ಶೆ : ಭೂತ ಬಂಗಲೆಯ ಕಥೆ ‘ ಕಸ್ತೂರಿ ಮಹಲ್ ‘
ಚಿತ್ರ : ಕಸ್ತೂರಿ ಮಹಲ್
ನಿರ್ದೇಶನ : ದಿನೇಶ್ ಬಾಬು
ನಿರ್ಮಾಣ : ರವೀಶ್ ಆರ್. ಸಿ (ಶ್ರೀ ಭವಾನಿ ಆರ್ಟ್ಸ್)
ಪಾತ್ರವರ್ಗ: ಶಾನ್ವಿ ಶ್ರೀವಾಸ್ತವ್, ರಂಗಾಯಣ ರಘು, ಸ್ಕಂದ ಅಶೋಕ್, ಕೆಂಪೇಗೌಡ, ನೀನಾಸಂ ಅಶ್ವಥ್, ಕಾಶಿಮಾ ಮುಂತಾದವರು.
ರೇಟಿಂಗ್ :3.5/5
ಭೂತ ಬಂಗಲೆ ಸುತ್ತ ನಡೆಯುವ ಚಿತ್ರ ವಿಚಿತ್ರ ಘಟನೆಗಳ ಜೊತೆಗೆ ಇರುವ ಫ್ಲ್ಯಾಶ್ ಬ್ಯಾಕ್ ಕಥೆಯೇ ಕಸ್ತೂರಿ ಮಹಲ್.
ದಿನೇಶ್ ಬಾಬು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾದಿರುವ 50ನೇ ಸಿನಿಮಾ ಇದು. ಕಥಾನಾಯಕಿ 700 ವರ್ಷಗಳ ಹಿಂದಿನ ಪುಸ್ತಕವೊಂದನ್ನು ಕದ್ದಾಗ ಉಂಟಾಗುವ ಸಮಸ್ಯೆಯ ಕಥೆ ಈ ಸಿನಿಮಾದಲ್ಲಿದೆ. ಈ ರೀತಿಯ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. ಈ ಸಾಲಿಗೆ ಕಸ್ತೂರಿ ಮಹಲ್ ಸೇರ್ಪಡೆ ಆಗಿದೆ.
ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಕಸ್ತೂರಿ ಮಹಲ್ ಹೊಂದಿದೆ. ಶ್ರೀ ಭವಾನಿ ಆರ್ಟ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬಂದಿದ್ದು, ಶಾನ್ವಿ ಶ್ರೀವಾಸ್ತವ್ ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ. ರಂಗಾಯಣ ರಘು, ಸ್ಕಂದ ಅಶೋಕ್, ಶೃತಿ ಪ್ರಕಾಶ್, ನೀನಾಸಂ ಅಶ್ವಥ್, ಕೆಂಪೇಗೌಡ ಚಿತ್ರದ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಆರ್ಕಿಯಾಲಜಿಸ್ಟ್ ಮೇಘ (ಶೃತಿ ಪ್ರಕಾಶ್) 700 ವರ್ಷಗಳ ಹಿಂದಿನ ಪುಸ್ತಕವೊಂದನ್ನು ಕದ್ದು ತರುತ್ತಾಳೆ. ಆ ಪುಸ್ತಕದಿಂದ ಮುಂದೆ ಆಕೆ ಮತ್ತು ಸ್ನೇಹಿತರು ಸಮಸ್ಯೆಗೆ ಸಿಲುಕುತ್ತಾರೆ. ಮೇಘ ಪ್ರಿಯಕರ ಸೂರ್ಯ (ಸ್ಕಂದ ಅಶೋಕ್) ಸ್ನೇಹಿತರ ಜೊತೆ ಆ್ಯಡ್ ಶೂಟಿಂಗ್ ಗಾಗಿ ಕೊಟ್ಟಿಗೆ ಹಾರಕ್ಕೆ ಹೋಗ್ತಾರೆ. ಅಲ್ಲಿ ‘ಕಸ್ತೂರಿ ಮಹಲ್’ನಲ್ಲಿ ಆ್ಯಡ್ ಶೂಟಿಂಗ್ ಪ್ಲಾನ್ ನಡೆಯುತ್ತೆ. ಅವರಿಗೆ ಸಹಾಯ ಮಾಡೋದಕ್ಕೆ ಅನಸೂಯ (ಶಾನ್ವಿ) ರೂಪದಲ್ಲಿ ಬರೋ ಕಸ್ತೂರಿ, ಎಲ್ಲರಿಗೂ ಕಾಟ ಕೊಡ್ತಾಳೆ. ಟೀ ಅಂಗಡಿ ಮಾಲೀಕ ಕಿಟ್ಟಪ್ಪ (ರಂಗಾಯಣ ರಘು) ಕಸ್ತೂರಿಗೆ ಸಹಾಯ ಮಾಡ್ತಾನೆ. ಒಟ್ಟಾರೆ ಕಸ್ತೂರಿ ಬಯಕೆ ಈಡೇರುತ್ತಾ? 700 ವರ್ಷ ಹಿಂದೆ ಸತ್ತ ಆದಿತ್ಯನಿಗೂ ಮೇಘಾಳ ಪ್ರಿಯಕರ ಸೂರ್ಯನಿಗೂ ಏನು ಸಂಬಂಧ ಎನ್ನುವುದಕ್ಕೆ ಚಿತ್ರ ನೋಡಬೇಕು.
ಕಸ್ತೂರಿ ಪಾತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಬೆಚ್ಚಿ ಬೀಳಿಸ್ತಾರೆ. ಟೀ ಅಂಗಡಿ ಮಾಲೀಕನ ಪಾತ್ರದಲ್ಲಿ ರಂಗಾಯಣ ರಘು ಅಭಿನಯ ಸೊಗಸಾಗಿದೆ.
ಪಿಕೆಹೆಚ್ ದಾಸ್ ಛಾಯಾಗ್ರಹಣ, ರಮೇಶ್ ಕೃಷ್ಣ ಹಿನ್ನಲೆ ಸಂಗೀತ ಕಥೆಗೆ ಪೂರಕವಾಗಿದೆ. ಹಾರರ್ ಚಿತ್ರಗಳನ್ನು ಇಷ್ಟಪಡುವವರು ಕಸ್ತೂರಿ ಮಹಲ್ ಚಿತ್ರ ನೋಡಬಹುದು.
________
Be the first to comment