ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದ ಕಾಶ್ಮೀರ್ ಫೈಲ್ಸ್’ ಚಿತ್ರದ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೇ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಚಿತ್ರ ಪ್ರದರ್ಶನ ಮಾಡಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ.
ಈ ಬಗ್ಗೆ ಮಾತನಾಡಿರುವ ಅಗ್ನಿಹೋತ್ರಿ, “ಇದೊಂದು ದೊಡ್ಡ ಜಯ. ಇಸ್ಲಾಮಿಕ್ ರಾಷ್ಟ್ರ ಸತತ ನಾಲ್ಕು ವಾರಗಳ ಕಾಲ ಚಿತ್ರವನ್ನು ಪರಿಶೀಲಿಸಿದ ನಂತರ ಯಾವುದೇ ಕತ್ತರಿ ಪ್ರಯೋಗವಿಲ್ಲದೆ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಚಿತ್ರಕ್ಕೆ 15+ ಪ್ರಮಾಣ ಪತ್ರ ನೀಡಲಾಗಿದೆ. ಏ. 7ರಂದು ಈ ಚಿತ್ರ ಯುಎಇಯಾದ್ಯಂತ ಬಿಡುಗಡೆಯಾಗಲಿದೆ” ಎಂದು ಹೇಳಿದ್ದಾರೆ.
ಸದ್ಯದಲ್ಲೇ ಈ ಚಿತ್ರ ಸಿಂಗಾಪುರದಲ್ಲಿಯೂ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
“ಭಾರತದಲ್ಲಿ ಕೆಲವರು, ಈ ಚಿತ್ರವನ್ನು ಇಸ್ಲಾಮೋಫೋಬಿಕ್ ಎಂದು ಬಣ್ಣಿಸಿದರು. ಆದರೆ ಇಸ್ಲಾಮಿಕ್ ದೇಶವೇ ಈ ಚಿತ್ರದಲ್ಲಿ ಯಾವುದೇ ಕಟ್‌ಗಳಿಗೆ ಸೂಚಿಸದೆ ಬಿಡುಗಡೆ ಮಾಡಲು ಒಪ್ಪಿದೆ” ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 1990ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಕುರಿತ ಕತೆಯನ್ನು ಒಳಗೊಂಡಿದೆ. ಕಾಶ್ಮೀರಿ ಪಂಡಿತರು ಏಕೆ ಜಮ್ಮು ಕಾಶ್ಮೀರ ಬಿಟ್ಟು ತೆರಳಿದರು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಸಿನಿಮಾದಲ್ಲಿ ಅನುಪಮ್ ಖೇರ್, ಚಕ್ರವರ್ತಿ ಮಿಥುನ್, ಕನ್ನಡದ ನಟ ಪ್ರಕಾಶ್ ಬೆಳವಾಡಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಇನ್ನಿತರರು ನಟಿಸಿದ್ದಾರೆ.
ಹಿಂದೂ – ಮುಸ್ಲಿಮರ ನಡುವೆ ದ್ವೇಷ ಹೆಚ್ಚಿಸುವ ಕಾರ್ಯವನ್ನು ಮಾಡಲು ಈ ಸಿನಿಮಾ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ಒಂದು ಕೋಮನ್ನು ಕೆಟ್ಟವರೆಂದು ಇನ್ನೊಂದು ಕೋಮನ್ನು ಅಮಾಯಕರೆಂದು ಚಿತ್ರಿಸಲಾಗಿದೆ ಎಂಬ ಆರೋಪಗಳು ಈ ಚಿತ್ರದ ವಿರುದ್ಧ ಕೇಳಿ ಬಂದಿದೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ತಮ್ಮ ಸಿನಿಮಾಕ್ಕೆ ತೊಂದರೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಚಿತ್ರದ ಪ್ರಚಾರಕ್ಕೆ ಹಲವರು ಸಹಕರಿಸಿಲ್ಲ ಎಂದು ದೂರಿದ್ದರು.
ಸಿನಿಮಾದ ವಿರುದ್ಧ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಪತ್ನಿ ದೂರು ದಾಖಲಿಸಿದ್ದರು. ಸತ್ಯ ಘಟನೆಯನ್ನು ತಿರುಚಿ ಸಿನಿಮಾ ಮಾಡಲಾಗಿದೆ. ತಮ್ಮ ಪತಿಯನ್ನು ಆಕ್ಷೇಪಾರ್ಹವಾಗಿ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಸಿನಿಮಾಕ್ಕೂ ನಿಜ ಘಟನೆಗಳಿಗೂ ಸಂಬಂಧವಿಲ್ಲ ಎಂದು ಅವರು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ರವಿ ಖನ್ನಾ ಪತ್ನಿಯ ದೂರಿನ ವಿಚಾರಣೆ ನಡೆಸಿದ ಜಮ್ಮು ಕಾಶ್ಮೀರ ಜಿಲ್ಲಾ ನ್ಯಾಯಾಲಯ ಸಿನಿಮಾದ ಕೆಲವು ದೃಶ್ಯಗಳನ್ನು ಕತ್ತರಿಸುವಂತೆ ಆದೇಶಿಸಿತ್ತು.
ಈ ಚಿತ್ರಕ್ಕೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ತೆರಿಗೆ ಮುಕ್ತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿವೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಈ ಚಿತ್ರದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
__
Be the first to comment