ಜನ ಮಾನಸದ ನಟನಿಗೆ ಕರ್ನಾಟಕ ರತ್ನ ಘೋಷಣೆ

ಅಕಾಲಿಕವಾಗಿ ಅಗಲಿದ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.

ಅಲ್ಲದೇ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ರಾಜ್‌ ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ ಕುಮಾರ್‌ ಅವರಂತೆಯೇ ಅವರ ಅಂತಿಮ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪುನೀತ್‌ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ”ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಪ್ರಶಸ್ತಿ ನೀಡುವ ಬಗ್ಗೆ ಕರ್ನಾಟಕದ ಜನತೆಯಿಂದ ಸಾಕಷ್ಟು ಮನವಿಗಳು ಬರುತ್ತಿವೆ. ಮುತ್ತುರಾಜನ ಮಗ, ಯುವರತ್ನನಿಗೆ ಕರ್ನಾಟಕ ರತ್ನ ನೀಡಲು ನನಗೆ ಹೆಮ್ಮೆಯಿದೆ” ಎಂದು ಬೊಮ್ಮಾಯಿ ಹೇಳಿದ್ದಾರೆ.

“ಅಪ್ಪು ನಮ್ಮೆಲ್ಲರಿಗೂ ಬಹಳ ಆತ್ಮೀಯ. ಅವನನ್ನು ಬಾಲ್ಯದಿಂದಲೇ ನಾನು ಬಲ್ಲೆ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆಯನ್ನು ಹೊಂದಿದ್ದರು. ಕರ್ನಾಟಕದ ಇತಿಹಾಸದಲ್ಲಿ ಬಾಲ ನಟನಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಪುನೀತ್‌ ರಾಜ್‌ ಕುಮಾರ್.‌ ನಾನು ಅವರ ಸಿನಿಮಾಗಳನ್ನು ನೋಡುತ್ತಿದ್ದೆ. ಅವರ ತಂದೆ ರಾಜ್‌ ಕುಮಾರ್ ಅವರ ಜೊತೆಗೆ ನಟನೆ ಮಾಡುವಾಗ, ಪುನೀತ್ ಪಾತ್ರಕ್ಕೆ ಅನುಗುಣವಾಗಿ ಸಂಬಂಧ ಬಿಟ್ಟು ರಾಜ್‌ ಕುಮಾರ್‌ ಅವರೊಂದಿಗೆ ಅದ್ಬುತವಾಗಿ ನಟಿಸುತ್ತಿದ್ದರು. ಅವರು ಸಣ್ಣ ವಯಸ್ಸಿನಲ್ಲಿಯೇ ಅಮೋಘ ಸಾಧನೆಯನ್ನುಮಾಡಿದ್ದರು” ಎಂದು ಹೇಳಿದ್ದಾರೆ.

ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು. ಆದರೆ ಮರಣೋತ್ತರವಾಗಿ ಪ್ರಶಸ್ತಿ ನೀಡಲು ಅವಕಾಶ ಇಲ್ಲ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದರು. ಅಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಒತ್ತಾಯ ಮಾಡಿದ್ದರು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!