ಕರ್ಕಿ

ಶೀಘ್ರದಲ್ಲಿಯೇ ತೆರೆಗೆ ಬರಲಿದೆ ‘ಕರ್ಕಿ’

ಕನ್ನಡ ಚಿತ್ರರಂಗಕ್ಕೆ ಬಾಲನಟನಾಗಿ ಪರಿಚಯವಾಗಿರುವ, ಇತ್ತೀಚೆಗೆ ಬಿಡುಗಡೆಯಾಗಿದ್ದ ‘ವಾಟ್ಸಾಪ್ ಲವ್’ ಹಾಗೂ ‘ರಾಜರಾಣಿ’ ಸಿನೆಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಯುವನಟ ಜಯಪ್ರಕಾಶ್ ರೆಡ್ಡಿ ಈಗ ‘ಕರ್ಕಿ’ ಚಿತ್ರದ ಮೂಲಕ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

ಇನ್ನು ‘ಕರ್ಕಿ’ ಸಮಾಜಕ್ಕೆ ಸಮಾನತೆಯ ಸಂದೇಶ ನೀಡುವ ಹಾಗೂ ಜಾತಿ ವ್ಯವಸ್ಥೆಯಿಂದ ಕೆಲವು ಪ್ರದೇಶಗಳಲ್ಲಿ ನಡೀತಿರುವ  ಶೋಷಣೆಗಳ ಸುತ್ತ ಸಾಗುವ ಕಥೆಯನ್ನು ಹೊಂದಿರುವ ಸಿನೆಮಾ ಎಂಬುದು ಚಿತ್ರತಂಡದ ಮಾತು. ‘ಕೆಳ ವರ್ಗದ ಯುವಕನೊಬ್ಬ ತನ್ನ ಜೀವನದ ಹಾದಿಯಲ್ಲಿ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾನೆ, ಅವುಗಳನ್ನೆಲ್ಲ ಮೆಟ್ಟಿ ನಿಂತು ಹೇಗೆ ಸಾಧನೆ ಮಾಡುತ್ತಾನೆ ಎಂಬುದನ್ನು ‘ಕರ್ಕಿ’ ಚಿತ್ರದ ಮೂಲಕ ತೆರೆಮೇಲೆ ಹೇಳಲು ಹೊರಟಿದ್ದೇವೆ. ಇಂಥ ಸಾಕಷ್ಟು  ಸೂಕ್ಷ್ಮ ಅಂಶಗಳು ಈ ಸಿನೆಮಾದಲ್ಲಿದೆ. ‘ಕರ್ಕಿ’ ಎಂಬುದು ಈ ಸಿನೆಮಾದಲ್ಲಿ ಬರುವ ಕಪ್ಪು ಬಣ್ಣದ ನಾಯಿಯ ಹೆಸರು. ಈ ಸಿನೆಮಾದಲ್ಲಿ ನಾಯಿಗೂ ಒಂದು ಪ್ರಮುಖ ಪಾತ್ರವಿದೆ. ಅದು ಏನು? ಹೇಗೆ ಎಂಬುದನ್ನು ‘ಕರ್ಕಿ’ ಸಿನೆಮಾದಲ್ಲೇ ನೋಡಬೇಕು’ ಎಂಬುದು ಚಿತ್ರದ ನಾಯಕ ನಟ ಜಯ ಪ್ರಕಾಶ್ ರೆಡ್ಡಿ ಮಾತು.

ಸುಮಾರು ಎರಡು ವರ್ಷಗಳಿಂದ ‘ಕರ್ಕಿ’ ಸಿನೆಮಾದ ಕೆಲಸಗಳು ನಡೆಯುತ್ತಿದ್ದು, ಚಿತ್ರವೀಗ ಬಿಡುಗಡೆಯ ಹಂತಕ್ಕೆ ತಲುಪಿದೆ. ತಮಿಳಿನಲ್ಲಿ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಪವಿತ್ರನ್, ‘ಕರ್ಕಿ’ ಸಿನೆಮಾದ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶಿವಮೊಗ್ಗ ದಾವಣಗೆರೆ, ಹುಬ್ಬಳ್ಳಿ, ಬಂಗಾರಪೇಟೆ, ಕೆಜಿಎಫ್, ಬೆಂಗಳೂರು, ಚನ್ನಪಟ್ಟಣ, ಕೋಲಾರ ಹಾಗೂ ಬಾಗಲಕೋಟೆ ಸುತ್ತಮುತ್ತ ‘ಕರ್ಕಿ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಾಯಿ ಅಭಿನಯದ ದೃಶ್ಯವನ್ನು ತಿರುನೆಲ್ವೇಲಿಯಲ್ಲಿ ಶೂಟ್ ಮಾಡಲಾಗಿದೆ. ಈಗಾಗಲೇ ಸದ್ದಿಲ್ಲದೆ ಬಹುತೇಕ ತನ್ನ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಕರ್ಕಿ’ ಸಿನೆಮಾ ಸೆನ್ಸಾರ್ ನಿಂದ ‘ಯು/ಎ’ ಪ್ರಮಾಣ ಪಡೆದು ರಿಲೀಸ್‌ಗೆ ಸಿದ್ದವಾಗಿದ್ದು, ಸೆಪ್ಟೆಂಬರ್ ನಲ್ಲಿ ಚಿತ್ರವನ್ನು  ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

ಜಯಪ್ರಕಾಶ್

ಬಾಲಿವುಡ್‌ನಲ್ಲಿ ಕರಣ್ ಜೋಹರ್ ಅವರ ‘ಧಡಕ್ 2’ ಹಾಗೂ ಕನ್ನಡದ ‘ಕರ್ಕಿ’ ಚಿತ್ರದ ಕಾನ್ಸೆಪ್ಟ್ ಎರಡೂ  ಒಂದೇ ರೀತಿಯಿದೆ ಎನ್ನುವ ನಾಯಕ ನಟ ಜಯಪ್ರಕಾಶ್, ‘ಬೇರೆ ಬೇರೆ ಜಾತಿಯ  ಹುಡುಗ ಮತ್ತು ಹುಡುಗಿ, ಸ್ನೇಹಿತರಾಗಿಯೂ‌ ಇರಬಹುದು, ಅವರ ಮಧ್ಯೆ ಪ್ರೀತಿಯೇ ಇರಬೇಕೆಂಬ ನಿಯಮವಿಲ್ಲ ಗೆಳೆತನ ಇದ್ದರೆ ತಪ್ಪೇನೂ ಇಲ್ಲ ಎಂಬ ಅಂಶಗಳು ಇವೆರಡೂ ಚಿತ್ರದಲ್ಲಿವೆ’ ಎಂದಿದ್ದಾರೆ.

‘ಕರ್ಕಿ’ ಚಿತ್ರದಲ್ಲಿ ಮೀನಾಕ್ಷಿ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸಾಧುಕೋಕಿಲ, ಬಲರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ ಸೇರಿದಂತೆ ಅನೇಕರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನೆಮಾದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ರಿಷಿಕೇಶ್ ಛಾಯಾಗ್ರಹಣ, ಶ್ರೀ ಸಂಕಲನ ಈ ಚಿತ್ರಕ್ಕಿದೆ. ಒಟ್ಟಾರೆ ತನ್ನ ಟೈಟಲ್ ಮತ್ತು ಕಂಟೆಂಟ್ ಮೂಲಕ ಒಂದಷ್ಟು ಸದ್ದು ಮಾಡುತ್ತಿರುವ ‘ಕರ್ಕಿ’ ಸಿನೆಮಾ ತೆರೆಮೇಲೆ ಹೇಗಿರಲಿದೆ ಎಂಬುದು ಶೀಘ್ರದಲ್ಲಿಯೇ ಗೊತ್ತಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!