ಕಾಂತಾರ ಚಿತ್ರವನ್ನು ತುಳು ಭಾಷೆಯಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ತುಳುನಾಡಿನವರು ತುಳು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಅವರ ಬೇಡಿಕೆಯಂತೆ ತುಳು ಭಾಷೆಯಲ್ಲೂ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಯಾವ ದಿನಾಂಕದಂದು ತುಳುಭಾಷೆಯ ಆವೃತ್ತಿಯ ಚಿತ್ರ ಬಿಡುಗಡೆಯಾಗಲಿದೆ ಎನ್ನುವುದು ಇನ್ನೂ ಬಹಿರಂಗಗೊಂಡಿಲ್ಲ.
ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಈಗಾಗಲೇ ರೂ.100 ಕೋಟಿ ಗಳಿಸಿದೆ. ಈಗಲೂ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಚಿತ್ರಕ್ಕೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ತಮಿಳು ಹಾಗೂ ಹಿಂದಿಯಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಮಲಯಾಳಂ ಆವೃತ್ತಿಯ ಸಿನಿಮಾ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಕರಾವಳಿ ಮತ್ತು ಮಲೆನಾಡು ಭಾಗದ ದೈವಾರಾಧನೆ, ಭೂತಕೋಲದ ಆಚರಣೆ ಕಾಂತಾರದ ಆಕರ್ಷಣೆ ಆಗಿದೆ. ಚಿತ್ರವನ್ನು ರಿಷಬ್ ಶೆಟ್ಟಿ ನಟಿಸುವ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ.
ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತವಿದೆ.
___





Be the first to comment