ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ಗೆ ಆಂಧ್ರ ಪ್ರದೇಶದಲ್ಲಿ ಬಹಿಷ್ಕಾರದ ಬೆದರಿಕೆ ಎದುರಾಗಿದೆ.
ಸೆಪ್ಟೆಂಬರ್ 25 ರಂದು ಬಿಡುಗಡೆಯಾದ ಪವನ್ ಕಲ್ಯಾಣ್ ಅವರ ‘ದೆ ಕಾಲ್ ಹಿಮ್ ಒಜಿ’ ಚಿತ್ರವು ಕರ್ನಾಟಕದಲ್ಲಿ ಟಿಕೆಟ್ ಬೆಲೆ ಏರಿಕೆ ಮತ್ತು ಒಂದು ನಿರ್ದಿಷ್ಟ ಗುಂಪಿನ ಜನರಿಂದ ವಿರೋಧ ಎದುರಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂತಾರ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ನಿರ್ಬಂಧಿಸಬೇಕು ಎಂದು ಕೆಲವರು ಹೇಳುತ್ತಿದ್ದಾರೆ.
ಆದರೆ ತೆಲುಗು ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಸೇಡಿನ ಹಾದಿಯಲ್ಲಿ ನಡೆಯಲು ಬಯಸುವುದಿಲ್ಲ ಎಂದಿದ್ದಾರೆ. ವೈಯಕ್ತಿಕ ಹಿತಾಸಕ್ತಿಗಳಿಂದ ಕೆಲವು ವ್ಯಕ್ತಿಗಳು ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ OG ಪ್ರದರ್ಶನ ತಡೆಯಲು ಪ್ರಯತ್ನಿಸಿರುವುದು ದುರದೃಷ್ಟಕರ. ಈ ಹಿಂದೆಯೂ ಕೆಲವು ತೆಲುಗು ಚಿತ್ರಗಳು ಇದೇ ರೀತಿಯ ಅಡೆತಡೆಗಳನ್ನು ಎದುರಿಸಿದ್ದವು.ಸಿನಿಮಾ, ಸಂಗೀತ, ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳಿಗೆ ಭಾಷೆ, ಪ್ರದೇಶ, ಜಾತಿ ಅಥವಾ ಧರ್ಮದ ಮಿತಿಗಳಿಲ್ಲ. ಎಲ್ಲ ವರ್ಗದ ಜನರನ್ನು ರಂಜಿಸುವುದು ಮತ್ತು ಕನೆಕ್ಟ್ ಆಗುವುದು ಅವುಗಳ ಮೂಲ ಉದ್ದೇಶವಾಗಿದೆ ಎಂದಿದ್ದಾರೆ ಪವನ್ ಕಲ್ಯಾಣ್
ಪ್ರತಿಯೊಬ್ಬ ವ್ಯಕ್ತಿಗೂ ತಾವು ಇಷ್ಟಪಡುವ ಸಿನಿಮಾ ನೋಡುವ ಹಕ್ಕಿದೆ. ಒಂದು ಸಿನಿಮಾ ಇಷ್ಟವಾಗದಿದ್ದರೆ, ಅದನ್ನು ನೋಡದಿರಲು ಆಯ್ಕೆ ಮಾಡಬಹುದು. ಆದರೆ ವೈಯಕ್ತಿಕ ದ್ವೇಷ ಅಥವಾ ಅಜೆಂಡಾಗಳನ್ನು ಬಳಸಿಕೊಂಡು ಸಿನಿಮಾಗಳನ್ನು ಗುರಿಯಾಗಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಇಂದು ಭಾರತೀಯ ಸಿನಿಮಾವನ್ನು ಪ್ರಪಂಚದಾದ್ಯಂತ ಎಲ್ಲ ಭಾಷೆಗಳಲ್ಲಿ ಆಚರಿಸಲಾಗುತ್ತಿದೆ. ಇಂತಹ ಸಮಯದಲ್ಲಿ, ಕಲೆಯನ್ನು ಪ್ರಾದೇಶಿಕ ಮಿತಿಯೊಳಗೆ ಸೀಮಿತಗೊಳಿಸುವ ಯಾವುದೇ ಪ್ರಯತ್ನವನ್ನು ತಿರಸ್ಕರಿಸಬೇಕು. ಒಳ್ಳೆಯ ಸಿನಿಮಾಗಳು ಎಲ್ಲಿಂದ ಬಂದರೂ ಅವುಗಳನ್ನು ಬೆಂಬಲಿಸೋಣ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
—-





Be the first to comment