ಮೂಕಹಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ಮತ್ತೊಂದು ಚಿತ್ರ ‘ಕನ್ನೇರಿ’ ರಿಲೀಸ್ ಗೂ ಮುನ್ನವೇ ಸಖತ್ ಸದ್ದು ಮಾಡಿ ಸ್ಯಾಂಡಲ್ ವುಡ್ ನಲ್ಲಿ ಬಝ್ ಕ್ರಿಯೇಟ್ ಮಾಡಿರೋದು ಗೊತ್ತಿರೋ ಸಂಗತಿ. ಚಿತ್ರೀಕರಣವನ್ನ ಕಂಪ್ಲೀಟ್ ಮಾಡ್ಕೊಂಡು ಇದೇ ಮಾರ್ಚ್ ತಿಂಗಳ ೪ ರಂದು ರಿಲೀಸ್ ಗೆ ತಯಾರಿ ನಡೆಸುತ್ತಿರುವ ಕನ್ನೇರಿ ಚಿತ್ರತಂಡ ಸಿನೆಮಾದ ಒಂದೊಂದೇ ಝಲಕ್ ಗಳನ್ನ ಪ್ರೇಕ್ಷಕರ ಮುಂದಿಡುತ್ತಾ ಸಿನೆಮಾ ಮೇಲಿನ ಕುತೂಹಲವನ್ನು ಹೆಚ್ಚಿಸುತ್ತಿದೆ.
ಇಂದು ಕನ್ನೇರಿ ಸಿನೆಮಾದ ಟ್ರೈಲರ್ ರಿಲೀಸ್ ಆಗಿದೆ. ಖ್ಯಾತ ನಟಿ ತಾರಾ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟ್ರೇಲರ್ ನೋಡಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ಸಿನಿಮಾ ಯಶಸ್ಸಾಗಲೆಂದು ಶುಭ ನುಡಿದಿದ್ದಾರೆ. ಟ್ರೈಲರ್ ನಲ್ಲಿ ಹೆಣ್ಣುಮಗಳೊಬ್ಬಳ ಮೇಲೆ ನಡೆಯುವ ದೌರ್ಜನ್ಯ, ಸಂತ್ರಸ್ತರ ನೋವು, ಅಧಿಕಾರದ ದರ್ಪ, ಎಲ್ಲವೂ ಅಡಗಿವೆ. ಟ್ರೈಲರ್ ನೋಡಿದ್ಮೇಲೆ ಕನ್ನೇರಿ ಸಿನೆಮಾ ದಲ್ಲಿ ಸಮ್ ಥಿಂಗ್ ಈಸ್ ದೇರ್ ಅನ್ನೋ ಭರವಸೆಯಂತೂ ಹುಟ್ಟಿರೋದು ನಿಜ.
‘ಕನ್ನೇರಿ’ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ. ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಹಾಗು ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು ಆಧಾರವಾಗಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಚಿತ್ರಕ್ಕೆ ಕಥೆಯ ಜವಾಬ್ದಾರಿಯನ್ನು ಕೋಟಿಗಾನಹಳ್ಳಿ ರಾಮಯ್ಯ ವಹಿಸಿಕೊಂಡಿದ್ರೆ, ಚಿತ್ರಕಥೆ ಹಾಗೂ ನಿರ್ದೇಶನದ ನೊಗವನ್ನು ನೀನಾಸಂ ಮಂಜು ಹೊತ್ತಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು? ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತೆ ಎಂಬ ಹೋರಾಟದ ಕಥೆ ಹೊಂದಿರುವ ಈ ಚಿತ್ರಕ್ಕೆ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ಜೀವ ತುಂಬಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತ ಕಲಾವಿದರು ಜೀವ ತುಂಬಿದ್ದು, ಚಿತ್ರ ನೈಜತೆಯಿಂದ ಮೂಡಿ ಬಂದಿದೆ ಎನ್ನಲು ಈಗಷ್ಟೇ ರಿಲೀಸ್ ಆದ ಟ್ರೈಲರ್ ಸಾಕ್ಷಿ.
ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಎಚ್.ಡಿ.ಕೋಟೆ, ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಚಿತ್ರಕ್ಕಿದ್ದು ಮಾರ್ಚ್ 4 ರಂದು ಪ್ರೇಕ್ಷಕರನ್ನು ರಂಜಿಸಲು ಥಿಯೇಟರ್ ಗೆ ಎಂಟ್ರಿ ಕೊಡಲಿದೆ.
Be the first to comment