ಕನ್ನಡದಲ್ಲಿ ಹೊಸಬರ ಸಾಲು ಸಾಲು ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿವೆ. ಇದೀಗ ಈ ಸಾಲಿಗೆ ಹೊಸ ಚಿತ್ರ ‘ಕನ್ನೇರಿ’ ಕೂಡ ಸೇರ್ಪಡೆಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಸಿನಿಮಾ ‘ಕನ್ನೇರಿ’. ಇದೀಗ ಚಿತ್ರತಂಡಕ್ಕೆ ವಸಿಷ್ಠ ಸಿಂಹ ಸಾಥ್ ನೀಡಿ ಹಾರೈಸಿದ್ದಾರೆ.
ಈಗಾಗಲೇ ಕನ್ನೇರಿ ಸಿನಿಮಾದ ಕೆಲ ಹಾಡುಗಳು ಕೇಳುಗರ ಮನ ಮುಟ್ಟಿದೆ. ಸದ್ಯ ‘ಕಾಣದ ಊರಿಗೆ’ ಎಂಬ ಹಾಡನ್ನು ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಅಂದಹಾಗೆ ಈ ಹಾಡನ್ನು ಕೋಟಿಗಾನಹಳ್ಳಿ ರಾಮಯ್ಯ ಅವರು ಪೋಣಿಸಿರುವ ಚೆಂದದ ಸಾಲುಗಳಿಗೆ ಕದ್ರಿ ಮಣಿಕಾಂತ್ ಅಷ್ಟೇ ಇಂಪಾದ ಮ್ಯೂಸಿಕ್ನ್ನು ನೀಡಿದ್ದು, ಹಾಡಿ ಧ್ವನಿಯಾಗಿ ಕೀರ್ತನಾ ಹೊಳ್ಳ ಹಾಗೂ ಹಿಂದು ನಾಗರಾಜ್ ಸುಮದುರವಾಗಿ ಹಾಡಿದ್ದು, ಸದ್ಯ ಈ ಹಾಡು ಕೇಳುಗರನ್ನು ಸೆಳೆಯುತ್ತಿದೆ.
ಅಲ್ಲದೆ ಕೋಟಿಗಾನಹಳ್ಳಿ ರಾಮಯ್ಯ ಬರೆದಿರುವ ಕಾದಂಬರಿ ಆಧಾರಿತ ಚಿತ್ರಕ್ಕೆ ನಿರ್ದೇಶಕ ನೀನಾಸಂ ಮಂಜು ಆ್ಯಕ್ಷನ್ ಕಟ್ ಹೇಳಿದ್ದು. ಮಂಜು ಚಿತ್ರಕಥೆಯ ಜತೆಗೆ ಕಲಾ ನಿರ್ದೇಶನ ಕೂಡ ನಿಭಾಯಿಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಭಾಷಣೆಯನ್ನೂ ರಚಿಸಿದ್ದಾರೆ.
ಕನ್ನೇರಿ ಸಿನಿಮಾದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ. ಸದ್ಯ ಚಿತ್ರದ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಒಂದೊಂದೆ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ.
ಇನ್ನು ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಗಣೇಶ್ ಹೆಗ್ಡೆ ಛಾಯಾಗ್ರಹಣ , ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ‘ಕನ್ನೇರಿ’ ಚಿತ್ರ ಅದ್ಬುತವಾಗಿ ಮೂಡಿ ಬಂದಿದೆ.
ಇನ್ನು ವಿಭಿನ್ನ ನೈಜತೆಯ ಕಥಾಹಂದರ ಹೊಂದಿರುವ ‘ಕನ್ನೇರಿ’ ಸಿನೆಮಾದಲ್ಲಿ ಪ್ರಕೃತಿಯ ಮಡಿಲಿನಲ್ಲಿ ಸುಂದರವಾಗಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನರನ್ನು, ಅರಣ್ಯ ಇಲಾಖೆ ಒಕ್ಕಲೆಬ್ಬಿತು. ಇದರಿಂದ ಅವರ ಬದುಕು ಯಾವ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿತು. ಹಾಗೇ ಬುಡಕಟ್ಟು ಜನಾಂಗದ ಬಾಲಕಿ ಮುತ್ತಮ್ಮ ಯಾನೆ ಕನ್ನೇರಿ ಮನೆಗೆಲಸ ಮಾಡುವಾಗ ಮನೆಯ ಮಾಲೀಕನ ದೌರ್ಜನ್ಯಕ್ಕೆ ತುತ್ತಾಗಿ ಜೈಲು ಸೇರುತ್ತಾಳೆ. ಆಕೆ ಜೈಲಿನಿಂದ ಹೊರಬರಲು ನಡೆಸುವ ಹೋರಾಟವನ್ನು ಸುಂದರವಾಗಿ ರಚಿಸಿ, ನಿರ್ಮಿಸಲಾಗಿದೆ.
Be the first to comment