‘ಆರ್‌ ಆರ್‌ ಆರ್’ ಚಿತ್ರಕ್ಕೆ ಕನ್ನಡಿಗರ ವಿರೋಧ

‘ಆರ್‌ಆರ್‌ಆರ್’ ಚಿತ್ರ ಮಾರ್ಚ್ 25ಕ್ಕೆ ರಿಲೀಸ್ ಆಗುತ್ತಿದ್ದು, ಕರ್ನಾಟಕದಲ್ಲಿ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಈ ಚಿತ್ರದ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡ ಅವತರಣಿಕೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್ಲ. ಕನ್ನಡ ಅವತರಣಿಕೆಯಲ್ಲಿ ‘ಆರ್‌ಆರ್‌ಆರ್’ ಚಿತ್ರದ ಟಿಕೆಟ್ ಬುಕ್ ಮಾಡಲು ಹೋದವರಿಗೆ ಕನ್ನಡದಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವೇ ಇಲ್ಲವಾಗಿದೆ. ಕರ್ನಾಟಕದಲ್ಲಿ ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಈ ಸಿನಿಮಾ ನೋಡಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಹಲವರು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್ಲ ಎನ್ನುವುದು ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಪರ ಸಂಘಟನೆಗಳು, ಕನ್ನಡಿಗರು ‘ಆರ್‌ಆರ್‌ಆರ್’ ಚಿತ್ರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ‘ಬಾಯ್‌ಕಾಟ್ ಆರ್‌ಆರ್‌ಆರ್’ ಟ್ರೆಂಡ್ ಆಗುತ್ತಿದೆ.

ಈ ಹಿಂದೆ ‘ಬಾಹುಬಲಿ’ ಸಿನಿಮಾ ರಿಲೀಸ್ ಆದ ವೇಳೆ ಹೀಗೆ ಆಗಿತ್ತು. ಆಗಲೂ ಕೂಡ ಕನ್ನಡ ಪರ ಸಂಘಟನೆಗಳು ಸಿನಿಮಾದ ವಿರುದ್ಧ ಹೋರಾಟ ಮಾಡಿದ್ದವು. ಈ ಚಿತ್ರವನ್ನು ರಿಲೀಸ್ ಮಾಡದಂತೆ ಪ್ರತಭಟಿಸಿದ್ದವು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ.

ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ಆರ್‌ಆರ್‌ಆರ್‌’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ. ಈ ಚಿತ್ರದಲ್ಲಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!