ಇಂದು ಒಟ್ಟು ನಾಲ್ಕು ಚಿತ್ರಗಳು ಬಿಡುಗಡೆ ಆಗಿದ್ದು, ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ.
ರಂಗಸಮುದ್ರ, ಕ್ಲಾಂತ, ಮತ್ತೆ ಮತ್ತೆ, ಅಡವಿ ಇಂದು ಪ್ರೇಕ್ಷಕರ ಮುಂದೆ ಬಂದಿದ್ದು , ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ನೋಡಬೇಕಿದೆ.
ಅಡವಿ:
ಕಾಡಿನ ಮೂಲ ನಿವಾಸಿಗಳ ಕಥೆ ಹೇಳುವ ಅಡವಿ ಸಿನಿಮಾವನ್ನು ಟೈಗರ್ ನಾಗ್ ಅವರು ಚಿತ್ರಕಥೆ ಬರೆದು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇದು ಕಾದಂಬರಿ ಆಧಾರಿತ ಚಿತ್ರವಾಗಿದೆ. ಅರಣ್ಯವೇ ಸರ್ವಸ್ವ ಎಂದು ನಂಬಿರುವ ಕಾಡಿನ ಮೂಲ ನಿವಾಸಿಗಳ ಜೀವನ, ಬುಡಕಟ್ಟು ಜನರು ಮತ್ತು ಪ್ರಸ್ತುತ ವ್ಯವಸ್ಥೆಯ ನಡುವಿನ ಸಂಘರ್ಷ ಚಿತ್ರದಲ್ಲಿದೆ. ಚಿತ್ರಕ್ಕೆ ಮಂಜು ಮಹಾದೇವ್ ಅವರ ಸಂಗೀತ, ವಿಪಿನ್ ವಿ. ರಾಜ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನವಿದೆ.
ರಂಗಸಮುದ್ರ:
ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ರಂಗಸಮುದ್ರ. ಅಜ್ಜ-ಮೊಮ್ಮಗನ ಕಥೆ ಹೊತ್ತ ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್, ಸಂಪತ್ ರಾಜ್, ಉಗ್ರಂ ಮಂಜು ಮುಂತಾದ ಕಲಾವಿದರು ನಟಿಸಿದ್ದಾರೆ. ಜನಪದ ಸೊಗಡಿನ ಈ ಚಿತ್ರಕ್ಕೆ ರಾಜಕುಮಾರ್ ಅಸ್ಕಿ ಆಯಕ್ಷನ್ ಕಟ್ ಹೇಳಿದ್ದಾರೆ. ವಾಗೀಶ್ ಚನ್ನಗಿರಿ ಹಾಡುಗಳನ್ನು ಬರೆದಿದ್ದು, ದೇಸಿ ಮೋಹನ್ ಸಂಗೀತ ನೀಡಿದ್ದಾರೆ. ಕೀರವಾಣಿ, ಕೈಲಾಶ್ ಖೇರ್, ವಿಜಯ ಪ್ರಕಾಶ್, ನವೀನ್ ಸಜ್ಜು ಮುಂತಾದ ಖ್ಯಾತ ಗಾಯಕರು ಹಾಡಿದ್ದಾರೆ.
ಕ್ಲಾಂತ:
ಕರಾವಳಿಯ ತಂಡದ ಈ ಸಿನಿಮಾವನ್ನುವೈಭವ್ ಪ್ರಶಾಂತ್ ನಿರ್ದೇಶಿಸಿದ್ದಾರೆ. ‘ಅನುಗ್ರಹ ಪವರ್ ಮೀಡಿಯಾ’ ಬ್ಯಾನರಿನಲ್ಲಿ ಉದಯ್ ಅಮ್ಮಣ್ಣಾಯ ಕೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತುಳುವಿನ ‘ದಗಲ್ ಬಾಜಿಲು’ ಎಂಬ ಸಿನಿಮಾದಲ್ಲಿ ನಟಿಸಿದ್ದ ವಿಘ್ನೇಶ್ ನಾಯಕ, ನಾಯಕಿಯಾಗಿ ಸಂಗೀತಾ ಭಟ್ ನಟಿಸಿದ್ದಾರೆ. ಶೋಭರಾಜ್, ವೀಣಾ ಸುಂದರ್, ಸಂಗೀತಾ, ದೀಪಿಕಾ, ಪ್ರವೀಣ್ ಜೈನ್, ಸ್ವಪ್ನಾ ಶೆಟ್ಟಿಗಾರ್ ತಾರಾಬಳಗದಲ್ಲಿದ್ದಾರೆ.
ಮತ್ತೆ ಮತ್ತೆ:
ಪತ್ರಿಕೋದ್ಯಮ ಪದವಿ ಮುಗಿಸಿ ಸಿನಿಮಾ ಮಾಡಲು ಹೊರಟ ಐವರು ವಿದ್ಯಾರ್ಥಿಗಳ ಸುತ್ತ ನಡೆಯುವ ಕಥೆ ಮತ್ತೆ ಮತ್ತೆ. ಪ್ರಾಧ್ಯಾಪಕ ಅರುಣ್ ಹೊಸಕೊಪ್ಪ ಕಥೆ, ಚಿತ್ರಕಥೆ ಬರೆದು ಸಿನಿಮಾ ನಿರ್ದೇಶಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಎಂ.ಎಸ್.ಉಮೇಶ್ ಕಾಣಿಸಿಕೊಂಡಿದ್ದಾರೆ. ಸಿಹಿಕಹಿ ಚಂದ್ರು ಅವರು ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ಸಂಜನಾ , ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಶಂಖನಾದ ಅಂಜಿನಪ್ಪ, ಪ್ರಕಾಶ್ ತುಮ್ಮಿನಾಡ್, ಶ್ರೀನಿವಾಸ್‌ಗೌಡ, ವೈಷ್ಣವಿ ಮೆನನ್, ತುಮಕೂರು ಮೋಹನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
Be the first to comment