ಕನ್ನಡದಲ್ಲಿ ಇಂದು ಹಲವು ಸಿನಿಮಾಗಳು ಬಿಡುಗಡೆ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆಯಲು ಮುಂದಾಗಿವೆ.
ಶ್ರೀನಗರ ಕಿಟ್ಟಿ ಅಭಿನಯದ ‘ಗೌಳಿ’ ಹೊರತುಪಡಿಸಿ ಈ ವಾರ ಹೊಸಬರ ಸಿನಿಮಾಗಳು ಹೆಚ್ಚು ಬಿಡುಗಡೆ ಕಂಡಿವೆ.
‘ಗೌಳಿ’ ಚಿತ್ರದ ಮುಖಾಂತರ ರಗಡ್ ಲುಕ್‌ನೊಂದಿಗೆ ನಾಯಕ ನಟ ಆಗಿ ಕಿಟ್ಟಿ ಮರಳಿದ್ದಾರೆ. ರಘು ಸಿಂಗಂ ನಿರ್ಮಾಣದ, ಸೂರ ಆಯಕ್ಷನ್ ಕಟ್ ಹೇಳಿರುವ ಈ ಚಿತ್ರ ಗೌಳಿ ಜನಾಂಗದ ಕಥೆ ಹೊತ್ತಿದೆ. ಸಿನಿಮಾಟೋಗ್ರಾಫರ್ ಆಗಿದ್ದ ಸೂರ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಕಿಟ್ಟಿಗೆ ಪಾವನ ಗೌಡ ನಾಯಕಿ ಆಗಿ ನಟಿಸಿದ್ದಾರೆ.
ಬೃಂದಾ ಆಚಾರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ ಜೂಲಿಯೆಟ್ 2′ ಇಂದು ಬಿಡುಗಡೆ ಆಗಿದೆ. ಕ್ರೈಮ್ ಥ್ರಿಲ್ಲರ್ ಜಾನರ್‌ನ ಈ ಚಿತ್ರವನ್ನು ವಿರಾಟ್ ಬಿ. ಗೌಡ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಕೂಡ ವಿರಾಟ್ ಅವರದ್ದೇ ಆಗಿದೆ.
‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ನರೇಶ್‌ಕುಮಾರ್ ಎಚ್.ಎನ್. ಹೊಸಳ್ಳಿ ಅವರ ನಿರ್ದೇಶನದ ಚಿತ್ರ ‘ಸೌತ್ ಇಂಡಿಯನ್ ಹೀರೋ’ ಬಿಡುಗಡೆ ಆಗಿದೆ. ಶಿಲ್ಪಾ ಈ ಚಿತ್ರದ ನಿರ್ಮಾಪಕಿ. ಕಿರುತೆರೆ ನಟ ಸಾರ್ಥಕ್, ‘ಲಾಜಿಕ್ ಲಕ್ಷ್ಮಣರಾವ್’ ಎಂಬ ಪಾತ್ರದಲ್ಲಿ ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ಕಾಶಿಮಾ ಹಾಗೂ ಮುಂಬೈ ಮೂಲದ ಊರ್ವಶಿ ನಟಿಸಿದ್ದಾರೆ.
ಸಂತೋಷ್ ಕುಮಾರ್ ನಿರ್ದೇಶನದ ಚಿತ್ರ ‘ಕ್ಯಾಂಪಸ್ ಕ್ರಾಂತಿ’ ಇಂದು ರಿಲೀಸ್ ಆಗಿದೆ. ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಸುತ್ತ ನಡೆಯುವ ಕಥೆ ಇದಾಗಿದೆ. ಆರ್ಯ, ಅಲಂಕಾರ್, ಇಶಾನಾ, ಆರತಿ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ. ಪ್ರೇಮಕಥೆಯ ಜೊತೆಗೆ, ಹಾಸ್ಯ, ಆಕ್ಷನ್ ಚಿತ್ರದಲ್ಲಿದೆ ಎಂದಿದೆ ಚಿತ್ರತಂಡ.
ವಸಿಷ್ಠ ಬಂಟನೂರು ಸಾರಥ್ಯದ ಮತ್ತೊಂದು ಚಿತ್ರ ‘1975’ ಇಂದು ಬಿಡುಗಡೆ ಆಗಿದೆ. ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್‌ನಡಿ ದಿನೇಶ್ ರಾಜನ್ ಈ ಚಿತ್ರ ನಿರ್ಮಿಸಿದ್ದಾರೆ. ಜೈ ಶೆಟ್ಟಿ, ಮಾನಸ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದಾರೆ. ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಉಪಕಥೆಗಳು ಚಿತ್ರದಲ್ಲಿದೆ ಎಂದು ಚಿತ್ರತಂಡ ತಿಳಿಸಿದೆ.
ಕೆ. ಶಂಕರ್ ಅವರ ನಿರ್ದೇಶನದ ಆರ್ಟಿಕಲ್ 370 ಚಿತ್ರ ಇಂದು ಬಿಡುಗಡೆ ಆಗಿದೆ. ಯೋಧರ ಸಾಹಸದ ಕಥೆಯ ಜೊತೆಗೆ ಜಮ್ಮು ಕಾಶ್ಮೀರದ ಪಂಡಿತರ ಮೇಲೆ ನಡೆದ ದೌರ್ಜನ್ಯದ ಘಟನೆಗಳನ್ನು ಇಲ್ಲಿ ಹೇಳಲಾಗಿದೆ ಎಂದು ಚಿತ್ರತಂಡ ಹೇಳಿದೆ.
ಶಶಿಕುಮಾರ್ ‘ಮೇಜರ್ ಸುಶೀಲ್ ಕುಮಾರ್’ ಎಂಬ ಸೇನೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿಯಾಗಿ ಶ್ರುತಿ ನಟಿಸಿದ್ದಾರೆ. ಭರತ್‌ಗೌಡ ಅವರ ನಿರ್ಮಾಣದ ಈ ಚಿತ್ರಕ್ಕೆ ಯುಗಂತ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಹಿತಿ ದೊಡ್ಡರಂಗೇಗೌಡ, ರಮಾನಂದ್, ವೆಂಕಟೇಶ್, ಲಕ್ಷ್ಮಣ, ಕಿಲ್ಲರ್ ವೆಂಕಟೇಶ್, ಅವಿನಾಶ್, ರಘುರಂಜನ್ ಪಾತ್ರವರ್ಗದಲ್ಲಿದ್ದಾರೆ.
ಕೋಲಾರ, ದೇವನಹಳ್ಳಿ ಸುತ್ತಮುತ್ತ ನಡೆದ ಕಥೆಯನ್ನಿಟ್ಟುಕೊಂಡು ಜೀವಾ ನವೀನ್ ಅವರು ನಿರ್ದೇಶಿಸಿರುವ ಚಿತ್ರ ‘ಪಾಲಾರ್’ ಇಂದು ತೆರೆ ಕಂಡಿದೆ. ಈ ಚಿತ್ರವನ್ನು ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಬಿಡುಗಡೆ ಮಾಡಿದೆ. ಇದೊಂದು ಮಹಿಳಾ ಪ್ರಧಾನ, ಸಂಘರ್ಷದ, ಹೋರಾಟದ ಕಥನ ಆಗಿದೆ.

___

Be the first to comment