‘ಸೌಂಡ್ಸ್ ಆಫ್ ಕಾಲಾಪತ್ಥರ್’: ವಿಕ್ಕಿ ವರುಣ್ – ಧನ್ಯಾ ರಾಮ್‌ಕುಮಾರ್ ಸಿನಿಮಾದಲ್ಲಿ ಹಾಡುಗಳ ದಿಬ್ಬಣ

ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ, ವಿಕ್ಕಿ ವರುಣ್ ನಿರ್ದೇಶಿಸಿ ನಾಯಕನಾಗೂ ನಟಿಸಿರುವ “ಕಾಲಾಪತ್ಥರ್” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದ ಐದು ಹಾಡುಗಳನ್ನು ಸೇರಿಸಿ “ಸೌಂಡ್ಸ್ ಆಫ್ ಕಾಲಾಪತ್ಥರ್” ಎಂಬ ಹಾಡುಗಳ ಗುಚ್ಛವನ್ನು ಕೆಲವೇ ನಿಮಿಷಗಳಲ್ಲಿ ತೋರಿಸುವ ವಿಭಿನ್ನ ಪ್ರಯತ್ನಕ್ಕೆ ಚಿತ್ರತಂಡ ಮುಂದಾಯಿತು. ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಸಿನಿಮಾ ಕುರಿತು ಮಾಹಿತಿ ನೀಡಿದರು.

ನಿರ್ದೇಶನ ನನ್ನ ಕನಸು. ಆ ಕನಸನ್ನು ನನಸು ಮಾಡಿದ ನಿರ್ಮಾಪಕರಿಗೆ ನಾನು ಆಭಾರಿ. ಸೂರಿ ಅವರ ಬಳಿ ಹತ್ತು ವರ್ಷ ಕೆಲಸ ಮಾಡಿರುವ ಅನುಭವದಿಂದ ನಿರ್ದೇಶನ ನನಗೆ ಅಷ್ಟು ಕಷ್ಟವಾಗಲಿಲ್ಲ. ನಿರ್ದೇಶನ ಹಾಗೂ ನಟನೆ ಎರಡು ಒಟ್ಟಿಗೆ ಮಾಡುವುದು ಸ್ವಲ್ಪ ಕಷ್ಟ. ಆದರೆ ನಮ್ಮ ಚಿತ್ರತಂಡದ ಸಹಕಾರದಿಂದ “ಕಾಲಾಪತ್ಥರ್” ನಾವು ಅಂದುಕೊಂಡ ಹಾಗೆ ಅದ್ಭುತವಾಗಿ ಮೂಡಿಬಂದಿದೆ. ಏನಾದರೂ ಹೊಸತು ಮಾಡಬೇಕು ಎಂದೆನಿಸಿ “ಸೌಂಡ್ಸ್ ಆಫ್ ಕಾಲಾಪತ್ಥರ್” ವಿಡಿಯೋವನ್ನು ಇಂದು ಬಿಡುಗಡೆ ಮಾಡಿದ್ದೇವೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. “ಕಾಲಾಪತ್ಥರ್” ಶೀರ್ಷಿಕೆ ಬಗ್ಗೆ ಹೇಳಿದರೆ, ಕಥೆ ಹೇಳಿದಂತೆ. ಹಾಗಾಗಿ ಅದರ ಬಗ್ಗೆ ಸಿನಿಮಾ ನೋಡಿದ ಮೇಲೆ ತಿಳಿಯುವುದು ಎಂದು ನಾಯಕ ಹಾಗೂ ನಿರ್ದೇಶಕ ವಿಕ್ಕಿವರುಣ್ ತಿಳಿಸಿದರು.

ಚಿತ್ರದಲ್ಲಿ ಐದು ಹಾಡುಗಳಿದೆ. ಡಾ|| ವಿ.ನಾಗೇಂದ್ರ ಪ್ರಸಾದ್ ಹಾಗೂ ಪ್ರಮೋದ್ ಮರವಂತೆ ಗೀತರಚನೆ ಮಾಡಿದ್ದಾರೆ. ವಿಜಯ್ ಪ್ರಕಾಶ್, ಸಾಯಿ ವಿಘ್ನೇಶ್, ಅಭಿಷೇಕ್, ಐಶ್ವರ್ಯ ರಂಗರಾಜನ್, ಶಿವಾನಿ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಹಾಡುಗಳನ್ನು ಹಾಡಿದ್ದಾರೆ. ಇಂದು ಬಿಡುಗಡೆಯಾದ “ಸೌಂಡ್ಸ್ ಆಫ್ ಕಾಲಾಪತ್ಥರ್” ವಿಕ್ಕಿವರುಣ್ ಅವರ ಕಾನ್ಸೆಪ್ಟ್ ಎಂದು ಸಂಗೀತ ನಿರ್ದೇಶಕ. ಅನೂಪ್ ಸೀಳಿನ್ ತಿಳಿಸಿದರು.

ನಾನು ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಮಾತನಾಡಿದ ನಾಯಕಿ ಧನ್ಯ ರಾಮಕುಮಾರ್, ಗಂಗಾ ಎಂಬ ಹೆಸರಿನ ಶಿಕ್ಷಕಿ ಪಾತ್ರ ನನ್ನದು ಎಂದು ಹೇಳಿದರು.

“ಕಾಲಾಪತ್ಥರ್” ಚಿತ್ರ ಚೆನ್ನಾಗಿ ಬಂದಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ತಿಳಿಸುತ್ತೇವೆ . ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕರಾದ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!