‘ಕಲ್ಕಿ’ : ಕನ್ನಡದಲ್ಲಿ ದೀಪಿಕಾ ಡಬ್‌

ಬಹು ನಿರೀಕ್ಷಿತ ಚಿತ್ರ ‘ಕಲ್ಕಿ 2898 ಎಡಿ’ ಕನ್ನಡ ಅವತರಣಿಕೆಯಲ್ಲಿ ತಮ್ಮ ಪಾತ್ರಕ್ಕೆ ದೀಪಿಕಾ ಪಡುಕೋಣೆ ಸ್ವತಃ ಡಬ್‌ ಮಾಡಲಿದ್ದಾರೆ ಎನ್ನಲಾಗಿದೆ.

‘ಕಲ್ಕಿ 2898 ಎಡಿ’  ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿದೆ. ಟಾಲಿವುಡ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಮೂಡಿಸಿದೆ. ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌ ಮತ್ತು ಕಮಲ್‌ ಹಾಸನ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಟಾಲಿವುಡ್‌ನ ನಿರ್ದೇಶಕ ನಾಗ್‌ ಅಶ್ವಿನ್‌ ಆಕ್ಷನ್‌ ಕಟ್‌ ಹೇಳುತ್ತಿರುವ ಬಹು ತಾರಾಗಣ ಹೊಂದಿರುವ ಚಿತ್ರ ಜೂನ್ 27ರಂದು ತೆರೆಗೆ ಬರಲಿದೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ಸ್ವತಃ ದೀಪಿಕಾ ಅವರೇ ಡಬ್‌ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2006ರಲ್ಲಿ ತೆರೆಕಂಡ ಉಪೇಂದ್ರ ಅಭಿನಯದ ಕನ್ನಡದ ʼಐಶ್ವರ್ಯಾʼ ಚಿತ್ರದ ಮೂಲಕ ದೀಪಿಕಾ ಬಣ್ಣದ ಲೋಕ ಪ್ರವೇಶಿಸಿದ್ದರು. ಅದರ ಬಳಿಕ ಅವರು ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ ಮೊದಲೇ ಒಪ್ಪಂದ ಮಾಡಿಕೊಂಡಂತೆ ಈ ತಿಂಗಳಲ್ಲಿ ಪ್ರೊಮೊಷನ್‌ ನಡೆಸಿಕೊಡಲಿದ್ದಾರೆ. ಇದರ ಜತೆಗೆ ಡಬ್ಬಿಂಗ್‌ ಅನ್ನೂ ಅವರು ಪೂರ್ಣಗೊಳಿಸಲಿದ್ದಾರೆ. ಸೆಪ್ಟಂಬರ್‌ನಲ್ಲಿ ಮಗು ಜನಿಸುವ ನಿರೀಕ್ಷೆ ಇದ್ದು, ಬಾಕಿ ಇರುವ ಸಿನಿಮಾ ಚಟುವಟಿಕೆಗಳನ್ನೆಲ್ಲ ಮುಗಿಸಿ ದೀಪಿಕಾ ಜೂನ್‌ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿರುವ ʼಕಲ್ಕಿ 2898 ಎಡಿʼ ಚಿತ್ರದಲ್ಲಿ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರು ಅಶ್ವತ್ಥಾಮನಾಗಿ ಕಾಣಿಸಿಕೊಳ್ಳಲಿದ್ದಾರೆ.  ವೈಜಯಂತಿ ಮೂವೀಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಬಾಲಿವುಡ್‌ ನಟಿ ದಿಶಾ ಪಠಾಣಿ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!