ಚಿತ್ರ: ಕಮಲ್ ಶ್ರೀದೇವಿ
ನಿರ್ದೇಶನ: ಸುನಿಲ್ ಕುಮಾರ್
ನಿರ್ಮಾಣ: ಧನಲಕ್ಷ್ಮಿ ಮತ್ತು ರಾಜವರ್ಧನ್
ತಾರಾಗಣ: ಸಚಿನ್ ಚೆಲುವರಾಯ ಸ್ವಾಮಿ, ಸಂಗೀತ ಭಟ್, ಕಿಶೋರ್ ಮೊದಲಾದವರು…
ರೇಟಿಂಗ್: 3.5/5
ಸಾಮಾನ್ಯವಾಗಿ ಅಪರಾಧ ಮತ್ತು ಕೌಟುಂಬಿಕ ಪ್ರೇಮ ಎರಡೂ ಕೂಡ ಎರಡು ಮಾದರಿಯ ಘಟನೆಗಳನ್ನು ಸೃಷ್ಟಿಸುತ್ತದೆ. ಆದರೆ ಅತಿಯಾದ ಪ್ರೇಮವೇ ಅಪರಾಧಕ್ಕೆ ಕಾರಣವಾಗುವ ಅಪರೂಪದ ಕಥೆಯೇ ಕಮಲ್ ಶ್ರೀದೇವಿ.
ಪ್ರಥಮ ದೃಶ್ಯದಲ್ಲೇ ವಸತಿಗೃಹದಲ್ಲಿ ನಡೆದಂಥ ಕೊಲೆಯನ್ನು ತೋರಿಸಲಾಗುತ್ತದೆ. ಈ ಕೊಲೆಯ ಹಿಂದಿನ ಕೈವಾಡ ಯಾರದು ಎನ್ನುವ ತನಿಖೆಯೊಂದಿಗೆ ಕಥೆ ಕುತೂಹಲಕಾರಿಯಾಗಿ ಮುಂದುವರಿಯುತ್ತದೆ.
ಒಂದು ಕೊಲೆಯ ಹಿಂದೆ 8 ಮಂದಿಯನ್ನು ಆರೋಪಿಗಳ ಸ್ಥಾನದಲ್ಲಿರಿಸಿ ವಿಚಾರಣೆ ನಡೆಸಲಾಗುತ್ತದೆ. ಹೀಗೆ ಸಾಗುವ ಕಥೆಯಲ್ಲಿ ಕೊಲೆಗಾರ ಯಾರು ಎನ್ನುವುದನ್ನು ಅನಿರೀಕ್ಷಿತ ತಿರುವಿನ ಮೂಲಕ ಕಟ್ಟಿಕೊಡಲಾಗಿದೆ.
ಲಾಡ್ಜ್ ನಲ್ಲಿ ಕೊಲೆಯಾಗುವ ವೇಶ್ಯೆಯ ಪಾತ್ರದಲ್ಲಿ ಸಂಗೀತಾ ಭಟ್ ನಟಿಸಿದ್ದಾರೆ. ಸಂಗೀತಾ ಈ ಬಾರಿ ಆಯ್ದುಕೊಂಡಿರುವ ವೇಶ್ಯೆಯ ಪಾತ್ರ ನಿಜಕ್ಕೂ ಛಾಲೆಂಜ್ ನೀಡುವಂತಿದೆ. ವೇಶ್ಯೆಯ ವೈಯಕ್ತಿಕ ಕಥೆಯಂತೆ ಆರಂಭಗೊಳ್ಳುವ ಚಿತ್ರದಲ್ಲಿ ಫ್ಲ್ಯಾಶ್ ಬ್ಯಾಕ್ ಮೂಲಕ ಒಂದು ಸಾಂಸಾರಿಕ ಕಥೆಯನ್ನು ತೆರೆದಿಡಲಾಗಿದೆ.
ಈ ಚಿತ್ರದಲ್ಲಿ ನಾಯಕನ ಹೆಸರು ಕಮಲ್. ಕಮಲ್ ಹಾಸನ್ ನಂತೆ ಚೆಲುವನಾದ ಸಚಿನ್ ಚೆಲುವರಾಯಸ್ವಾಮಿ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಸಿನಿಮಾದೊಳಗೆ ಸಿನಿಮಾ ಮಾಡಿ ಸೋತು ಹೋದ ಫಿಲ್ಮ್ ಡೈರೆಕ್ಟರ್ ಒಬ್ಬನ ಜೀವನ ಕಥೆಯನ್ನು ಕೂಡ ಹೇಳಲಾಗಿದೆ.
ಕಮಲ್ ಶ್ರೀದೇವಿ ಸಿನಿಮಾದಲ್ಲಿ ಹೀರೋ, ಹೀರೋಯಿನ್ ಬಳಿಕ ಪ್ರಮುಖವಾಗಿ ಎದ್ದು ಕಾಣುವ ಪಾತ್ರವೇ ‘ಮಾಮು’ನದ್ದು. ಮಾಮು ಅಂದರೆ ಮಾರೇನಹಳ್ಳಿ ಮುನಿಸ್ವಾಮಿ. ಬೆಂಗಳೂರಿನ ಕೆ ಆರ್ ಮಾರ್ಕೆಟ್ ಏರಿಯಾದಲ್ಲಿನ ತಲೆ ಹಿಡುಕನೀತ. ಲಾಡ್ಜ್ ನಲ್ಲಿ ಕೊಲೆಯಾದ ವೇಶ್ಯೆಯನ್ನು ಈತನೇ ಕರೆ ತಂದಿರುವ ಕಾರಣ ಈತನ ಮೇಲೆಯೇ ಪೊಲೀಸರ ಪ್ರಥಮ ಅನುಮಾನ ಶುರುವಾಗಿರುತ್ತದೆ. ಈ ಮಾಮು ಪಾತ್ರವನ್ನು ನೈಜವಾಗಿ ಪರದೆ ಮೇಲೆ ಮೂಡಿಸಿದ ಕೀರ್ತಿ ರಮೇಶ್ ಇಂದಿರಾರಿಗೆ ಸಲ್ಲುತ್ತದೆ.
ಇಡೀ ಪ್ರಕರಣದ ತನಿಖೆ ನಡೆಸುವ ಶಿಸ್ತಿನ ಪೊಲೀಸ್ ಅಧಿಕಾರಿಯಾಗಿ ಕಿಶೋರ್ ನಟಿಸಿದ್ದಾರೆ. ವೇಶ್ಯೆಯ ಬಳಿಗೆ ಗಿರಾಕಿಗಳಲ್ಲಿ ಒಬ್ಬರಾಗಿ ಎಂ ಎಸ್ ಉಮೇಶ್ ಅಭಿನಯಿಸಿರುವುದು ವಿಶೇಷ. ಸಿನಿಮಾದಲ್ಲಿ ಹಾಡುಗಳು ಆಕರ್ಷಕವಾಗಿ ಮೂಡಿವೆ. ಹಾಸ್ಯ ಮಿಶ್ರಿತವಾಗಿ ಅಪರಾಧ ಲೋಕದ ಕಥೆಯನ್ನು ಮತ್ತು ಅದರ ಹಿಂದಿನ ಮಾತೃಪ್ರೇಮವನ್ನು ಸೆರೆಹಿಡಿದ ನಿರ್ದೇಶಕ ಸುನಿಲ್ ಕುಮಾರ್ ನಿಜಕ್ಕೂ ಅಭಿನಂದನಾರ್ಹರು.






Be the first to comment