‘ಕಡೆಮನೆ’ಯಲ್ಲಿ ಹಾರರ್ ಮತ್ತು ಕಾಮಿಡಿ

‘ಕಡೆಮನೆ’ ನಿಗೂಢ ರಹಸ್ಯ ಏನು ಗೊತ್ತಾ..?

ಕೀರ್ತನ ಕ್ರಿಯೇಷನ್ಸ್ ಅಡಿ ನಂದನ್ ಎಸ್. ತುಮಕೂರು ನಿರ್ಮಿಸಿರುವ ಹೊಸ ಸಿನಿಮಾ ಕಡೆಮನೆ. ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವವರು ವಿನಯ್. ಇವರು ತಮ್ಮ ಮೊದಲ ಸಿನಿಮಾದಲ್ಲೇ ಸೈಕಲಾಜಿಕಲಿ ಹಾರರ್ ಮತ್ತು ಕಾಮಿಡಿ ಮೂಲಕ ಜನರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ತೆರೆಗೆ ಬರಲು ಸಿದ್ಧವಾಗಿರುವ ಈ ಸಿನಿಮಾದಲ್ಲಿ ನಾಯಕ ಯುವರಾಜ್, ನಾಯಕಿಯಾಗಿ ಕಲ್ಪನಾ ಅಭಿನಯಿಸಿದ್ದಾರೆ. ಬ.ಲ. ರಾಜವಾಡಿ, ಆಯಿಷಾ, ಬ್ಯಾಂಕ್ ಜನಾರ್ದನ್, ಸಿಲ್ಲಿಲಲ್ಲಿ ಶ್ರೀನಿವಾಸಗೌಡ, ಮಂಡ್ಯ ಸಿದ್ದು, ವಿಜಯ್ ಇಂದ್ರಜಿತ್, ಬೇಬಿ ಪ್ರಾರ್ಥನಾ, ಐಟಮ್ ಡ್ಯಾನ್ಸರ್ ಆಲಿಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಗೌತಮ್ ಶ್ರೀವತ್ಸ ಸಂಗೀತ ಸಂಯೋಜಿಸಿದ್ದಾರೆ. ಮಧುಸೂದನ್ ಮತ್ತು ಶ್ಯಾಮ್ ಅವರ ಛಾಯಾಗ್ರಹಣವಿದ್ದು, ರಘುನಾಥ್ ಹಾಗೂ ಕುಮಾರ್ ಎಚ್.ಸಿ ಸಂಕಲನ, ಅರುಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇನ್ನು ಎಫೆಕ್ಟ್ಸ್ ಆಂಡ್ ಡಿಟಿಎಸ್ ಶಂಕರ್ ಅಳವಡಿಸಿದ್ದಾರೆ. ಈ ಚಿತ್ರ ಸಂಪೂರ್ಣ ಹಳ್ಳಿಯಲ್ಲಿ ನಡೆಯುವ ಕಥೆಯಾಗಿದ್ದು, ಹಳ್ಳಿಯಲ್ಲಿ ಪಡ್ಡೆ ಹುಡುಗರು ಮಾಡುವ ಅವಾಂತರ, ಮುಚ್ಚಿಟ್ಟ ಸತ್ಯ ಸಂಗತಿಗಳ ನಡುವೆ ಚಿತ್ರ ಸಾಗಲಿದೆಯಂತೆ. ಈ ಕುರಿತು ಕಡೆಮನೆ ಚಿತ್ರತಂಡ  ಬಿಸಿನಿಮಾಸ್ ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದೆ.

ಸ್ಯಾಂಡಲ್‍ವುಡ್‍ಗೆ ‘ಯುವರಾಜ್’ ಎಂಟ್ರಿ
ಮೂಲತಃ ನಾನು ಡ್ಯಾನ್ಸರ್. ತುಮಕೂರಿನ ಗ್ರಾಮೀಣ ಪ್ರದೇಶದಲ್ಲಿ ಹತ್ತು ವರ್ಷಗಳಿಂದ ಡ್ಯಾನ್ಸ್ ಕಲಿತು, ಇದೀಗ ನನ್ನದೇ ಆದ ಒಂದು ಡ್ಯಾನ್ಸ್ ಕ್ಲಾಸ್ ಆರಂಭಿಸಿದ್ದೇನೆ. ಈ ನಡುವೆ ಸಾಕಷ್ಟು ಕಿರುಚಿತ್ರ ಹಾಗೂ ಟೆಲಿ ಮೂವೀಸ್ ಮಾಡಿದ್ದೆವು. ಹೀಗಿರುವಾಗ ನಿರ್ದೇಶಕ ವಿನಯ್ ಹಾಗೂ ನಿರ್ಮಾಪಕ ನಂದನ್ ಸರ್ ಅವರು ‘ಕಡೆಮನೆ’ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಬ್ಬರಿಗೂ ನಾನು ಯಾವತ್ತಿಗೂ ಚಿರಋಣಿಯಾಗಿರುತ್ತೇನೆ. ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೆ ಇದು ಕಂಪ್ಲೀಟ್ ಹಳ್ಳಿಯಲ್ಲಿ ನಡೆಯುವಂತಹ ಹಾರಾರ್ ಮತ್ತು ಕಾಮಿಡಿ ಬೇಸಡ್ ಸಿನಿಮಾ. ನಿರ್ದೇಶಕರು ನೈಜತೆ ಹೆಚ್ಚಿನ ಹೊತ್ತು ಕೊಟ್ಟಿದ್ದಾರೆ. ಇದರಿಂದ ನನ್ನ ನಟನಾ ಪ್ರತಿಭೆಯನ್ನು ತೋರಿಸಲು ಸಾಧ್ಯವಾಗಿದೆ. ನಮ್ಮ ಚಿತ್ರದ ಮುಹೂರ್ತಕ್ಕೆ ಶರಣ್ ಸರ್ ಬಂದು ಕ್ಲಾಪ್ ಮಾಡಿ ಶುಭ ಹಾರೈಸಿದರು. ಈಗಲು ಕೂಡ ಸಂಪರ್ಕದಲ್ಲಿದ್ದುಕೊಂಡು ನನಗೆ ಗೈಡ್ ಮಾಡ್ತಾಇರ್ತಾರೆ. ಶೂಟಿಂಗ್ ಸ್ಪಾಟ್‍ನಲ್ಲಿ ಸೀನಿಯರ್ ಆರ್ಟಿಸ್ಟ್‍ಗಳ ಸಪೋರ್ಟ್ ನನಗೆ ತುಂಬಾ ಚೆನ್ನಾಗಿ ಸಿಕ್ಕಿತು. ಡ್ಯಾನ್ಸ್ ಕಲಿತಿದ್ದು ಸನ್ನಿವೇಶಕ್ಕೆ ತಕ್ಕಂತೆ ಎಕ್ಸ್‍ಪ್ರೆಷನ್ ಕೊಡುವುದಕ್ಕೆ ಸುಲಭ ಆಯಿತು. ನನ್ನ ನಟನೆ ನೋಡಿ ಎಲ್ಲರೂ ಸೀನಿಯರ್ ಆರ್ಟಿಸ್ಟ್ ಥರ ಆಕ್ಟ್ ಮಾಡ್ತಿಯ ಅಂತ ಪ್ರಶಂಸೆ ವ್ಯಕ್ತಪಡಿಸ್ತಿದ್ರು. ಒಂದು ಒಳ್ಳೆ ಟೀಂ ಸೇರಿಕೊಂಡು ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಕನ್ನಡ ಜನತೆ ನಮಗೆ ಆಶೀರ್ವಾದ ಮಾಡಬೇಕು.
ಫಸ್ಟ್ ರ್ಯಾಂಕ್ ಸ್ಟೂಡೆಂಟ್ ಡೈರೆಕ್ಟರ್ ಆದ ಕಥೆ
ನಾನು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕವಲ್ಲ. ಮೊದಲಿನಿಂದಲೂ ನಿರ್ದೇಶಕನಾಗಬೇಕು ಎಂಬ ಕನಸಿತ್ತು. ತುಮಕೂರಿನಲ್ಲಿ 5ನೇ ರ್ಯಾಂಕ್ ಪಡೆದುಕೊಂಡು ಡಿಗ್ರಿ ಮುಗಿಸಿದೆ. ಮೈಸೂರಿನಲ್ಲಿ ಮಾಸ್ಟರ್ ಡಿಗ್ರಿ ಡಿಸ್ಟಿಂಕ್ಷನ್‍ನಲ್ಲಿ ಪಾಸ್ ಮಾಡಿದೆ. ಧಾರವಾಡಕ್ಕೆ ಪ್ರಾಜೆಕ್ಟ್ ವರ್ಕ್‍ಗೆ ಹೋದಾಗ ಒಂದು ನೈಜವಾದ ಘಟನೆಯನ್ನು ತುಂಬಾ ಹತ್ತಿರದಿಂದ ನೋಡಿದ್ದೆ. ಅದನ್ನು ನನ್ನದೇ ಆದ ವ್ಯೂನಲ್ಲಿ ಬರೆಯುವಾಗ ಸುಧಾ ಮ್ಯಾಗಜಿನ್ ಚೀಫ್ ಎಡಿಟರ್ ದಿಲ್ವಾರ್ ರಾಮದುರ್ಗ ಅವರ ಪರಿಚಯವಾಯಿತು. ಅಲ್ಲಿಂದ ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿಗಳನ್ನು ಓದುವುದಕ್ಕೆ ಶುರುಮಾಡಿದೆ. ಅದು ನನಗೆ ಚಿತ್ರಕಥೆ ಬರೆಯಲು ಪ್ರೇರಣೆಯಾಯಿತು. ಬಳಿಕ ಅರುಣ್ ಕುಮಾರ್ ಎಂಬ ಕಲಾವಿದರಿಂದ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಳಿಯ ರಾಮ್‍ದೀಪ್ ಅವರ ಪರಿಚಯವಾಯಿತು. ಅವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಅಲ್ಲಿಂದ ನಾನೇ ಇಂಡಿಪೆಂಡೆಂಟ್ ಆಗಿ ಸಿನಿಮಾ ಮಾಡಬೇಕು ಅಂದುಕೊಂಡಾಗ ನಿರ್ಮಾಪಕ ನಂದನ್ ಸರ್ ಅವರ ಪರಿಚಯವಾಗಿ ಸಿನಿಮಾ ಮಾಡೋಣ ಅಂದರು. ಯುವರಾಜ್ ಅವರ ಕಣ್ಣುಗಳು ಇಷ್ಟ ಆಗಿ ಅವರನ್ನು ನಾಯಕನ ಪಾತ್ರಕ್ಕೆ ಆಯ್ಕೆಮಾಡಿಕೊಂಡೆ. ಕಲ್ಪನಾ ಹಳ್ಳಿ ಹುಡುಗಿಯ ಪಾತ್ರಕ್ಕೆ ಸಖತ್ ಆಗಿ ಸೂಟ್ ಆದ್ರು. ಖಳನಟ ಬಾಲರಾಜ್ ವಾಡಿ ಅವರು ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಅವರನ್ನು ನಟನೆಯಲ್ಲಿ ಬಕಾಸುರ ಅಂತ ಹೇಳಬಹುದು. ಒಟ್ಟಾರೆ ಕಡಿಮೆ ಬಜೆಟ್‍ನಲ್ಲಿ, ಅಂದುಕೊಂಡ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿಯೇ ಸಿನಿಮಾ ಮಾಡಿ ಮುಗಿಸಿದ್ದೇವೆ. ನಮ್ಮ ಸಿನಿಮಾವನ್ನು ಜನ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ.
ಅಂದು ಆರ್ಕೆಸ್ಟ್ರಾ ಸಿಂಗರ್.. ಇಂದು ಸಿನಿಮಾ ಪ್ರೊಡ್ಯೂಸರ್
– ನಂದನ್ ಎಸ್. ತುಮಕೂರು
ಮೂಲತಃ ನಾನು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನವನು. ಬಾಲ್ಯದಿಂದಲೇ ಡಾ.ರಾಜ್‍ಕುಮಾರ್ ಮತ್ತು ವಿಷ್ಣುವರ್ಧನ್ ಸಿನಿಮಾಗಳನ್ನು ನೋಡುತ್ತಾ ಬೆಳೆದೆ. ಮನೆಯಲ್ಲಿ ಬಡತನ ಇದ್ದದ್ದರಿಂದ ಮುಂದೆ ನಂಜನಗೂಡಿನ ಥಿಯೇಟರ್‍ನಲ್ಲಿ ಸಿನಿಮಾ ಆಪರೇಟರ್ ಆಗಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡಿದೆ. ಆ ದಿನಗಳಲ್ಲೇ ಮುಂದೆ ಯಾವತ್ತಾದರೂ ಒಂದು ದಿನ ಚಿತ್ರ ನಿರ್ಮಾಣ ಮಾಡಬೇಕು ಕನಸು ಕಂಡಿದ್ದೆ. ನನ್ನ ತಂದೆಯ ಆರೋಗ್ಯ ಸರಿಯಿಲ್ಲದ ಕಾರಣ ತುಮಕೂರಿಗೆ ಬಂದು ನನ್ನ ಚಿಕ್ಕಪ್ಪ-ಚಿಕ್ಕಮ್ಮನವರ ಮನೆಯಲ್ಲಿ ನೆಲೆಸಿದ್ದೆ. ನನಗೆ ಹಾಡು ಹೇಳುವುದರಲ್ಲಿ ಆಸಕ್ತಿ ಇದ್ದದ್ದರಿಂದ ಆರ್ಕೆಸ್ಟ್ರಾ ತಂಡಗಳಿಗೆ ಗಾಯಕನಾಗಿ ಸೇರಿಕೊಂಡೆ. ಹೀಗಿರುವಾಗಲೇ ತುಮಕೂರಿನ ಹೆಸರಾಂತ ಎಸ್‍ಆರ್‍ಎಸ್ ಬಸ್ ಮಾಲೀಕರ ಕುಟುಂಬದÀ ಸುಜಾತ ಎಂಬುವವರನ್ನ ವಿವಾಹವಾದೆ. ಮುಂದೆ ಸ್ನೇಹಿತರ ಜೊತೆಗೂಡಿ ನಾನೇ ಸ್ವಂತ ‘ಕ್ರೇಜಿ ವಾಯ್ಸ್’ ಎಂಬ ಆರ್ಕೆಸ್ಟ್ರಾ ಮಾಡಿಕೊಂಡೆ. ಎಲ್ಲಾ ಊರು-ಊರುಗಳಿಗೆ ತೆರಳಿ ಜಾತ್ರೆ, ಮದುವೆ ಮುಂತಾದ ಕಾರ್ಯಕ್ರಮಗಳನ್ನ ನಡೆಸಿ, ತುಮಕೂರಿನಲ್ಲಿ ಉತ್ತಮ ಹಾಡುಗಾಗರ ನಂದನ್ ಎಂದು ಎಲ್ಲರ ಮನೆಮಾತಾದೆ. ಕಾಲ ಕ್ರಮೇಣ ಅರ್ಕೆಸ್ಟ್ರಾಗಳಲ್ಲಿ ಅರೆನಗ್ನ ನೃತ್ಯಗಳಿಗೆ ಜನರು ಡಿಮ್ಯಾಂಡ್ ಮಾಡುವುದಕ್ಕೆ ಶುರುಮಾಡಿದರು. ಆರ್ಕೆಸ್ಟ್ರಾ ಅಲ್ಲಿಗೆ ಬಿಟ್ಟು ಒಂದು ಒಳ್ಳೆ ಸಿನಿಮಾ ನಿರ್ಮಿಸುವ ನಿರ್ಧಾರಕ್ಕೆ ಬಂದೆ. ನಿರ್ದೇಶಕ ವಿನಯ್ ಅವರು ಮೊದಲು ಸಂತೃಪ್ತಿ ಎಂಬ ಹೋಟೆಲ್ ನಡೆಸುತ್ತಿದ್ದರು. ಅಲ್ಲಿ ಅವರ ಪರಿಚಯವಾಯಿತು. ಅವರು ಕೂಡ ನನ್ನ ಅಭಿರುಚಿಗೆ ತಕ್ಕಂತ ವ್ಯಕ್ತಿ. ಕಥೆ ಹೇಳಿದರು. ಇಷ್ಟ ಆಯ್ತು. ಒಂದೆರಡು ಚಿಕ್ಕ ಬದಲಾವಣೆ ಮಾಡಿಕೊಳ್ಳುವಂತೆ ಮಾಡಲು ಒಪ್ಪಿಕೊಂಡೆ. ತಾರಾಬಳಗವು ಕೂಡ ಬೇಗ ಕೂಡಿಕೊಂಡು ಬಂತು. ಆಗ ನನ್ನ ಮಗಳ ಹೆಸರಿನಲ್ಲಿ ‘ಕೀರ್ತನ ಕ್ರಿಯೇಷನ್ಸ್’ ನಿರ್ಮಾಣ ಸಂಸ್ಥೆ ಮೂಲಕ ಕಡೆಮನೆ ಎಂಬ ಈ ಚಿತ್ರವನ್ನು ಪ್ರೊಡ್ಯೂಸ್ ಮಾಡಿದ್ದೇನೆ. ಒಂದು ಒಳ್ಳೆ ಮನೋರಂಜನಾತ್ಮಕ ಸಿನಿಮಾ ಮಾಡಿದ್ದೇವೆ. ಮುಂದೆ ವರ್ಷಕ್ಕೆ ಎರಡು ಉತ್ತಮ ಸಂದೇಶವುಳ್ಳ ಸಿನಿಮಾಗಳನ್ನು ನಿರ್ಮಿಸುವ ಕನಸು ಹೊತ್ತಿದ್ದೇನೆ. ಜನರು ನೋಡಿ ಪ್ರೋತ್ಸಾಹಿಸಿ, ಆಶೀರ್ವದಿಸಿದರೆ ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸಲು ಬಲ ಸಿಕ್ಕಂತಾಗುತ್ತೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!