ಚಿನ್ನಾರಿ ಮುತ್ತಾ ಖ್ಯಾತಿಯ ವಿಜಯ್ ರಾಘವೇಂದ್ರ ತಮ್ಮ ಹೊಸ ಚಿತ್ರಕ್ಕಾಗಿ ಸಿಗರೇಟ್ ಸೇದುವುದನ್ನು ಕಲಿತಿದ್ದಾರೆ! ಸೀತಾರಾಮ್ ಬಿನೊಯ್ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ವಿಜಯ್ ರಾಘವೇಂದ್ರ ತಮ್ಮ ಲೆಟೆಸ್ಟ್ ಸಿನಿಮಾ “ಕದ್ದ ಚಿತ್ರ” ಕ್ಕಾಗಿ ಸಿಗರೇಟ್ ಸೇದುವ ಅಭ್ಯಾಸ ರೂಢಿ ಮಾಡಿದ್ದಾರೆ.
ಈ ಚಿತ್ರದಲ್ಲಿ ಅವರು ಡಿಫರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಬಗ್ಗೆ ಮಾಹಿತಿ ನೀಡಿದ ವಿಜಯ್ ರಾಘವೇಂದ್ರ, “ನಿರ್ದೇಶಕ ಸುಹಾಸ್ ಕಥೆ ಹೇಳಿ ಈ ರೀತಿ ನಿಮ್ಮನ್ನು ಪ್ರೆಸೆಂಟ್ ಮಾಡಬೇಕು ಅಂದುಕೊಂಡಿದ್ದೇನೆ ಅಂದಿದ್ದರು. ಆಗ ನಾನು ಈ ಪಾತ್ರದಲ್ಲಿ ನಟಿಸಬಹುದಾ ಎಂಬ ಅನುಮಾನಗಳಿದ್ದವು. 25 ವರ್ಷಗಳಿಂದ ಚಿತ್ರಗಳಲ್ಲಿ ನಟಿಸಿದ್ದರೂ ಇದುವರೆಗೂ ಆನ್‍ಸ್ಕ್ರೀನ್ ಸಿಗರೇಟ್ ಮುಟ್ಟಿಲ್ಲ. ನಿಜ ಜೀವನದಲ್ಲೂ ನಾನು ಧೂಮಪಾನ ಮಾಡುವುದಿಲ್ಲ. ಆದರೆ ಕದ್ದ ಚಿತ್ರದಲ್ಲಿ ಮೊದಲ ಬಾರಿಗೆ ಸಿಗರೇಟ್ ಸೇದಿದ್ದೇನೆ. ಸಿಗರೇಟ್ ಸೇದುವುದು ನನಗೆ ನಿಜವಾದ ಸಾಹಸ ಆಗಿದೆ ” ಎಂದು ಹೇಳಿದ್ದಾರೆ.
“ಸಿಗರೇಟ್ ಸೇದುವುದು ಒಳ್ಳೆಯ ವಿಚಾರ ಅಲ್ಲ. ಅದು ಆರೋಗ್ಯಕ್ಕೂ ಹಾನಿಕರ. ಆದರೆ ಕೆಲವರ ವ್ಯಕ್ತಿತ್ವಗಳೇ ಸಿಗರೇಟ್ ಜತೆ ಗುರುತಿಸಿಕೊಂಡಿರುತ್ತದೆ. ನಾನು ಈ ಚಿತ್ರದಲ್ಲಿ ಕಥೆಗಾರನ ಪಾತ್ರದಲ್ಲಿ ನಟಿಸಿದ್ದೇನೆ” ಎಂದು ಅವರು ತಿಳಿಸಿದ್ದಾರೆ.” ಸ್ನೇಹಿತರ ಸಿಗರೇಟ್ ಪ್ಯಾಕ್ ತಗೊಂಡು ಬಿಸಾಡುವುದು ಮಾಡುತ್ತಿದ್ದೆ. ಅವರೆಲ್ಲ ನಿನಗೂ ಸಿಗರೇಟ್ ಸೇದುವ ಕ್ಯಾರಕ್ಟರ್ ಸಿಗಲಿ ಅಂತ ಬೈಯುತ್ತಿದ್ದರು. ಈ ಸಿನಿಮಾ ಬಂದ ಬಳಿಕ ಅವರಿಗೆ ಸಮಾಧಾನ ಆಗುತ್ತದೆ ಅಂದುಕೊಂಡಿದ್ದೇನೆ” ಎಂದಿದ್ದಾರೆ ಚಿನ್ನಾರಿ ಮುತ್ತಾ.
“ಚಿತ್ರೀಕರಣ ಮುಗಿದ ಬಳಿಕ ಸಿಗರೇಟ್ ದೂರ ಇಟ್ಟಿದ್ದೇನೆ. ನನಗೆ ಸಿಗರೇಟ ಇಷ್ಟವಿಲ್ಲ. ಅದು ಬೇಕು ಎಂದು ಅನ್ನಿಸಿಯೇ ಇಲ್ಲ” ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.
___
Be the first to comment