‘ಅಜ್ಜ’ ಎಂಬ ಶೀರ್ಷಿಕೆಯ ಚಿತ್ರದಲ್ಲಿ ಅಜ್ಜನಾಗಿ ದತ್ತಣ್ಣ ನಟಿಸಿದ್ದಾರೆ. ಹಾಗಾಗಿ ಇದೊಂದು ಕಲಾತ್ಮಕ ಚಿತ್ರ ಎಂಬ ಬೇಲಿ ಹಾಕಿಕೊಳ್ಳಬೇಡಿ. ದತ್ತಣ್ಣನ ನಟನೆಗೆ ಪ್ರಶಸ್ತಿ ಬಂದರೆ ಅಚ್ಚರಿಯಿಲ್ಲ. ಆದರೆ ಭೂತಬಂಗಲೆಯಲ್ಲಿ ನಡೆಯುವ ಈ ಕತೆಯಲ್ಲಿ ಕಮರ್ಷಿಯಲ್ ಅಂಶಗಳು ಕೂಡ ಒಳಗೊಂಡಿವೆ ಎನ್ನುತ್ತಾರೆ ನಿರ್ದೇಶಕ ವೇಮಗಲ್ ಜಗನ್ನಾಥ ರಾವ್. ಮುಖ್ಯವಾಗಿ ಇದು ಒಂದು ಜಾನರ್ ಗೆ ಸೀಮಿತವಾದ ಚಿತ್ರವಲ್ಲ, ಇಲ್ಲಿ ರಾಜಕೀಯ, ಸಾಮಾಜಿಕ ಕಳಕಳಿಯ ವಿಚಾರಗಳಿವೆ.ಇದು ಕಾದಂಬರಿ ಆಧಾರಿತ ಚಿತ್ರ. ಆ ಕಾದಂಬರಿಯನ್ನು ಖುದ್ದು ವೇಮಗಲ್ ಜಗನ್ನಾಥ ರಾವ್ ಅವರೇ ಬರೆದಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ. ಅಂದಹಾಗೆ ಆ ಕಾದಂಬರಿಗೆ ನೈಜ ಘಟನೆಯೇ ಅವರಿಗೆ ಸ್ಫೂರ್ತಿಯಾಗಿತ್ತು ಎಂದರು.
ಚಿತ್ರದ ನಿರ್ಮಾಪಕ ಕೆ.ಪಿ ಚಿದಾನಂದ್ ಅವರು ಮೈಸೂರಿನವರು. ವಕೀಲ ವೃತ್ತಿಯಲ್ಲಿದ್ದ ಅವರು ಅಜ್ಜ ಕತೆ ಇಷ್ಟಪಟ್ಟು ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವಿಭಿನ್ನ ಚಿತ್ರ ಮಾಡಬೇಕೆಂಬ ಆಸೆ ಈಗ ನೆರವೇರಿದೆ.ಹಾರರ್ ಜೊತೆಗೆ ಸೆಂಟಿಮೆಂಟ್ ಕೂಡ ಇರುವುದು ವಿಶೇಷ ಎಂದರು.ಚಿತ್ರಕ್ಕೆ ನವ ಸಂಗೀತ ನಿರ್ದೇಶಕ ಸಾಯಿಕಿರಣ್ ಸಂಗೀತ ನೀಡಿದ್ದಾರೆ. ಎರಡು ಹಾಡುಗಳು, ಹಿನ್ನೆಲೆ ಸಂಗೀತಕ್ಕೆ ಪ್ರಾಮುಖ್ಯತೆ ಇದೆ. ದತ್ತಣ್ಣನ ಪಾತ್ರದಲ್ಲಿ ವೇರಿಯೇಶನ್ಸ್ ಇದೆ ವೃದ್ಧಾಶ್ರಮದಲ್ಲಿನ ದೃಶ್ಯಗಳಿವೆ. ಅರವಿಂದ್ , ಕೀರ್ತಿ ಮರಾಠೆ ಮೊದಲಾದ ಕಿರುತೆರೆ ಪ್ರತಿಭೆಗಳು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಬಾಲನಟಿಯಾಗಿ ಪೃಥ್ವಿ ಶ್ರೀ ಕಾಣಿಸಿಕೊಂಡಿದ್ದಾಳೆ. ನಿಜದಲ್ಲಿ
ಎಂಟನೇ ತರಗತಿ ವಿದ್ಯಾರ್ಥಿನಿಯಾಗಿರುವ ತಾನು ಚಿತ್ರದಲ್ಲಿ ಅನಾಥೆಯ ಪಾತ್ರ ನಿರ್ವಹಿಸಿರುವುದಾಗಿ ಹೇಳಿಕೊಂಡಳು. ತಾನು ವೃದ್ಧಾಶ್ರಮದಲ್ಲಿರುವ ಅಜ್ಜನನ್ನು ಪ್ರೀತಿಯಿಂದ ನೋಡಿಕೊಳ್ಳುವ ಸನ್ನಿವೇಶಗಳು ಚಿತ್ರದಲ್ಲಿದೆ ಎನ್ನುವುದು ಆಕೆಯ ಸಂಭ್ರಮ.ದತ್ತಣ್ಣನಿಗೆ ಅಜ್ಜ ಎಂದು ಕರೆಸಿಕೊಳ್ಳುವುದೇ ಇಷ್ಟವಿಲ್ಲ. ಅಣ್ಣ ಎನ್ನಿ, ಅಂಕಲ್ ಎನ್ನಿ ; ಆದರೆ ಈ ಅಜ್ಜ ಎಂದೊಡನೆ ಸಿಟ್ಟು ಬರುತ್ತೆ ನನಗೆ; ಇನ್ನು ಅಜ್ಜನೆಂದೇ ಕರೆಸಿಕೊಳ್ಳುವ ಪಾತ್ರ ಹೇಗೆ ಒಪ್ಪಲಿ? ಎಂದರು ಹಿರಿಯನಟ ದತ್ತಣ್ಣ. ಆದರೆ ಅವರನ್ನು ಒಪ್ಪಿಕೊಳ್ಳುವಂತೆ ಮಾಡಿದ ಅಂಶಗಳು ಹಲವು.
ಚಿತ್ರದಲ್ಲಿ ಅಜ್ಜನ ಪಾತ್ರ ವಾರ್ಧಕ್ಯದ ತೊಂದರೆಗಳಿಗೆ ಮಾತ್ರ ಸೀಮಿತವಲ್ಲ. ಇದೊಂಥರ ಮಲ್ಟಿ ಲೇಯರ್ ರೋಲ್. ವಾಸ್ತವ ಮತ್ತು ಭ್ರಮೆಯ ನಡುವಿನ ಪಾತ್ರ. ಚಿತ್ರದುದ್ದಕ್ಕೂ ಕ್ರಿಯೇಟೆಡ್ ಕನ್ಫ್ಯೂಷನ್ ಇರುತ್ತದೆ. ಕತೆಗೂ ಬೇರೆ ಬೇರೆ ಶೇಡ್ ಇದೆ. ಗಂಡ ಹೆಂಡತಿ, ಮಗ ತಂದೆ ನಡುವಿನ ಸಂಬಂಧಗಳ ಅನಾವರಣ ಇದೆ. ಮಗ ಯುವಜನಾಂಗದ ರೆಪ್ರೆಸೆಂಟ್ ಮಾಡುತ್ತಿರುತ್ತಾನೆ.ಅರಮನೆಯಂಥ ಮನೆಯಿಂದ ವೃದ್ಧಾಶ್ರಮ ಸೇರುವ ಅಜ್ಜ ಅದರಿಂದ ಹೊರಬರಲು ಮಾಡುವ ಪ್ರಯತ್ನಗಳು ಕತೆಗೆ ಕುತೂಹಲ ಅಂಶಗಳನ್ನು ನೀಡಿವೆ. ಇಂಥದೊಂದು ಪಾತ್ರಕ್ಕಾಗಿ ಅಜ್ಜ ಎಂದಷ್ಟೇ ಅಲ್ಲ, ಮುತ್ತಾತ ಎಂದು ಕರೆಸಿಕೊಳ್ಳಲು ಕೂಡ ಬೇಜಾರಿಲ್ಲ ಎನ್ನುತ್ತಾರೆ ದತ್ತಣ್ಣ.ಚಿತ್ರದಲ್ಲಿ ಲತೀಶ್ ಮಡಿಕೇರಿ ಎಂಬ ಯುವ ಪ್ರತಿಭೆಯ ಪ್ರವೇಶವಾಗಿದೆ. ಖಳ ಛಾಯೆಯ ಪಾತ್ರದಲ್ಲಿ ನಟಿಸಿದ್ದಾರೆ. ಮಡಿಕೇರಿಯಲ್ಲಿ ಚಿತ್ರೀಕರಣ ಭೂತ ಬಂಗಲೆಯೊಂದರಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿರುವ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ.
Be the first to comment