1500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಕೆಜಿಎಫ್ ಜೊತೆ ಕಬ್ಜ ಸಿನಿಮಾ ಹೋಲಿಕೆ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ನಿರ್ದೇಶಕ ಆರ್ ಚಂದ್ರು ಹೇಳಿದ್ದಾರೆ.
ಕಬ್ಜ ಹಾಲಿವುಡ್ ಗುಣಮಟ್ಟದಲ್ಲಿ ತಯಾರಾದ ಚಿತ್ರವಾಗಿದ್ದು, ತನ್ನದೇ ಆದ ಹೆಗ್ಗುರುತು ಸೃಷ್ಟಿಸಲಿದೆ. ಜನರಲ್ಲಿ ಪ್ರತ್ಯೇಕ ಬ್ರಾಂಡ್ ಸೃಷ್ಟಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಕಬ್ಜ ಸಿನಿಮಾವನ್ನು ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಮಾಡುವ ನಮ್ಮ ಗುರಿಯು ಮೊದಲ ಟೀಸರ್‌ನಲ್ಲಿ ಯಶಸ್ವಿಯಾಗಿದೆ. ಎಲ್ಲಾ ಭಾಷೆಗಳಿಂದಲೂ ಜನರು ಟೀಸರ್ ವೀಕ್ಷಿಸಿದ್ದಾರೆ. ನಾವು ಶೀಘ್ರದಲ್ಲೇ 30 ಮಿಲಿಯನ್ ವೀಕ್ಷಣೆಗಳನ್ನು ತಲುಪುತ್ತೇವೆ ಎಂದು ಚಂದ್ರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕಬ್ಜದ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ಕಬ್ಜದ ಮೇಲೆ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗಿದ್ದು, ನಿರ್ದೇಶಕರು ಇನ್ನೂ ಬಿಡುಗಡೆಯ ದಿನಾಂಕ ಫಿಕ್ಸ್ ಮಾಡಿಲ್ಲ.
ಚಿತ್ರವು ಸಾಕಷ್ಟು ವಿಎಫ್‌ಎಕ್ಸ್ ಕೆಲಸಗಳನ್ನು ಹೊಂದಿದೆ. 7 ಭಾಷೆಗಳಲ್ಲಿ ಡಬ್ ಮಾಡಬೇಕಾಗಿದೆ. ಅವುಗಳನ್ನು ಪೂರ್ಣಗೊಳಿಸಿದ ನಂತರವೇ ಬಿಡುಗಡೆಯ ದಿನಾಂಕ ಫಿಕ್ಸ್ ಮಾಡಲಾಗುವುದು ಎಂದು ಚಂದ್ರು ತಿಳಿಸಿದ್ದಾರೆ.
ನಾಯಕ ನಟ ಉಪೇಂದ್ರ ಜೊತೆಗೆ ಮುಂದಿನ ಪ್ರಚಾರಕ್ಕಾಗಿ ದುಬೈಗೆ ಹೋಗುತ್ತಿರುವುದಾಗಿ ಚಂದ್ರು ತಿಳಿಸಿದ್ದಾರೆ.
ಎಂ.ಟಿ.ಬಿ ನಾಗರಾಜ್ ಅವರು ‘ಕಬ್ಜ’ ಚಿತ್ರ ಅರ್ಪಿಸುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ಅವರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ.
ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನ ಇದೆ.
ಅಂಡರ್ ವರ್ಲ್ಡ್ ಕಥೆ ಇರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಜೊತೆಗೆ ಕಾಮರಾಜನ್(ಐ ಸಿನಿಮಾ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ನಟಿಸಿದ್ದಾರೆ.
__
Be the first to comment