ಯಾವಾಗ ಮಿತಿಗಳನ್ನ ಮೀರುವ ಮನಸಾಗುತ್ತೋ, ಗೆರೆಗಳನ್ನ ದಾಟಿಕೊಳ್ಳುವ ಹುರುಪು ತುಂಬಿಕೊಳ್ಳುತ್ತೋ ಅದು ಹೊಸ ಸೃಷ್ಟಿಗೆ ನಾಂದಿ ಹಾಡುತ್ತೆ. ಪ್ರತೀ ಸಿನಿಮಾಗಳನ್ನೂ ಕೂಡಾ ಅಂಥಾದ್ದೇ ಮನಸ್ಥಿತಿಯಿಂದ ದೃಷ್ಯ ಕಾವ್ಯವಾಗಿಸುತ್ತಾ, ಗೆಲ್ಲುತ್ತಾ ಸಾಗಿ ಬಂದಿರುವವರು ನಿರ್ದೇಶಕ ಆರ್ ಚಂದ್ರು. ಅವರ ಸಿನಿಮಾಗಳೆಂದರೆ ಅಲ್ಲೊಂದು ಫ್ಯಾಷನ್ ಇರುತ್ತೆ, ಅಗಾಧ ಅದ್ಧೂರಿತನ ಇದ್ದೇ ಇರುತ್ತೆ. ಸದ್ಯ ಅದೆಲ್ಲವನ್ನೂ ಮೀರಿಸುವಂತೆ ಮಿನುಗುತ್ತಿರೋ ಚಿತ್ರ ‘ಕಬ್ಜ’.
ಆರ್ ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ನಿನ ಕಬ್ಜ ಆರಂಭದಿಂದಲೂ ಸುದ್ದಿ ಕೇಂದ್ರದಲ್ಲಿದೆ. ಅದ್ಭುತ ಕಥೆ, ಅದ್ದೂರಿ ಮೇಕಿಂಗ್‍ನ ಸುಳಿವಿನೊಂದಿಗೇ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಸದ್ದು ಮಾಡೋ ಖದರ್ ಕಬ್ಜಾಗಿದ್ದಂತಿದೆ. ಇದೀಗ ಎಲ್ಲ ಕೆಲಸ ಕಾರ್ಯಗಳನ್ನ ಮುಗಿಸಿಕೊಂಡು ಬಿಡುಗಡೆಯ ಹಾದಿಯಲ್ಲಿರೋ ಈ ಸಿನಿಮಾದ ವೆಬ್‍ಸೈಟ್ ಅನಾವರಣ ಕಾರ್ಯಕ್ರಮ ಬೆಂಗಳೂರಿನ ಶೆರ್ಟಾನ್ ಹೊಟೇಲಿನಲ್ಲಿ ನಡೆದಿದೆ. ಖ್ಯಾತ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಉಪೇಂದ್ರ, ಎಂಟಿಬಿ ನಾಗರಾಜ್ ಸಮ್ಮುಖದಲ್ಲಿ ವೆಬ್‍ಸೈಟ್ ಅನಾವರಣಗೊಂಡಿದೆ.
ಈ ನೆಪದಲ್ಲಿ ಮಹಾ ಗೆಲುವೊಂದನ್ನು ಕಬ್ಜ ಮಾಡಿಕೊಳ್ಳೋ ಮಹಾ ಕನಸನ್ನು ಆರ್. ಚಂದ್ರು ಮೆಲುಕು ಹಾಕಿದ್ದಾರೆ. ವೆಬ್ ಸೈಟ್ ಲಾಂಚ್ ಮಾಡಲು ಪ್ರೀತಿಯಿಂದ ಆಗಮಿಸಿದ ಶಿವರಾಜ್ ಕುಮಾರ್, ರಾಜಕಾರಣಿ ಎಂಟಿಬಿ ನಾಗರಾಜ್‍ರನ್ನು ಪ್ರೀತಿಯಿಂದ ಕೊಂಡಾಡುತ್ತಲೇ ತಮ್ಮ ಮಹತ್ವಾಕಾಂಕ್ಷೆಯನ್ನ ತೆರೆದಿಟ್ಟಿದ್ದಾರೆ. ಆ ಮಾತುಗಳಲ್ಲಿಯೇ ಕಬ್ಜ ರೂಪುಗೊಂಡ ಖದರ್ ಕೂಡಾ ಹೊಳೆದಿದೆ.
ಆರ್.ಚಂದ್ರು ಯಾವುದೇ ಕಾರ್ಯಕ್ರಮ ಮಾಡಿದರೂ ಅಲ್ಲೊಂದು ಪಾಸಿಟಿವ್ ಎನರ್ಜಿ ಸುಳಿದಾಡುವಂತೆ ನೋಡಿಕೊಳ್ಳುತ್ತಾರೆ. ಅದು ಅವರ ಭರವಸೆಯ ಮಾತುಗಳಿಂದಲೇ ಪ್ರವಹಿಸುತ್ತೆ. ಈ ಬಾರಿಯೂ ಅವರು ಪ್ಯಾನಿಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಘನತೆಯನ್ನ ಪ್ರತಿಫಲಿಸುವ ಮಾತುಗಳನ್ನಾಡಿದ್ದಾರೆ. ಉಪ್ಪಿಯ ಜೊತೆಗೂಡಿ ದೇಶಾದ್ಯಂತ ಗೆಲುವು ದಾಖಲಿಸೋ ಹುರುಪನ್ನೂ ಹೊರ ಹಾಕಿದ್ದಾರೆ.
ಈಗಾಗಲೇ ಕಬ್ಜ ದೇಶದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಅದು ಈ ಸಿನಿಮಾ ಮತ್ತು ಚಂದ್ರು ಅವರ ಪರಿಶ್ರಮದ ಪ್ರತೀಕ ಅಂತ ಶಿವಣ್ಣ ಮೆಚ್ಚಿಕೊಂಡಿದ್ದಾರೆ. ಇದೇ ಹೊತ್ತಿನಲ್ಲಿ ಚಂದ್ರು ಅವರ ಅದ್ದೂರಿತನ, ಸಮರ್ಪಣಾ ಭಾವಗಳನ್ನೂ ಶಿವಣ್ಣ ಮೆಚ್ಚಿಕೊಂಡಿದ್ದಾರೆ. ಇನ್ನು ಈ ಹಿಂದಷ್ಟೇ ಐ ಲವ್ ಯೂ ಸಿನಿಮಾ ಗೆದ್ದ ಖುಷಿ, ಮತ್ತೆ ಕಬ್ಜ ಮೂಲಕ ಚಂದ್ರುಗೆ ಜೊತೆಯಾದ ಥ್ರಿಲ್‍ನೊಂದಿಗೇ ಉಪ್ಪಿ ಕೂಡಾ ಮಾತಾಡಿದ್ದಾರೆ. ಅದರಲ್ಲಿಯೂ ಕಬ್ಜ ಮಹಾ ಗೆಲುವಿನ ರೂವಾರಿಯಾಗೋ ಭರವಸೆಯೇ ಮಾರ್ಧನಿಸಿದೆ. ಒಟ್ಟಾರೆಯಾಗಿ ಕೊರೊನಾ ಭೀತಿಯ ನಡುವೆಯೂ ಕಬ್ಜ ಚಿತ್ರದ ವೆಬ್‍ಸೈಟ್ ಅನಾವರಣ ಕಾರ್ಯಕ್ರಮ ಸಿನಿ ಜಗತ್ತಿನಲ್ಲಿ, ಸಿನಿಮಾ ಪ್ರೇಮಿಗಳಲ್ಲಿ ಹಸ ಆವೇಗ ಮೂಡಿಸಿದೆ.
Pingback: CI CD Company