ತಮಿಳಿನಲ್ಲಿ ‘ಜಂಟಲ್ ಮ್ಯಾನ್’, ‘ಕಾದಲನ್’, ‘ಕಾದಲ್ ದೇಶಂ’ ಸೇರಿದಂತೆ ದೊಡ್ಡ ಬಜೆಟ್ ನ ಮತ್ತು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದ ಹಿರಿಯ ನಿರ್ಮಾಪಕ ಕೆ.ಟಿ. ಕುಂಜುಮೋನ್ ನಿರ್ಮಿಸುತ್ತಿರುವ ‘ಜಂಟಲ್ ಮ್ಯಾನ್ 2’ ಚಿತ್ರವು ಶನಿವಾರ, ಚೆನ್ನೈನಲ್ಲಿ ಅದ್ದೂರಿಯಾಗಿ ಪ್ರಾರಂಭವಾಗಿದೆ.
ಚೆನ್ನೈನ ರಾಜ ಮುತ್ತಯ್ಯ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಿರ್ದೇಶಕ ಗೋಕುಲ್ ಕೃಷ್ಣ ಅವರಿಗೆ ನಿರ್ಮಾಪಕ ಕುಂಜುಮೋನ್, ಚಿತ್ರದ ಸ್ಕ್ರಿಪ್ಟ್ ಹಸ್ತಾಂತರಿಸುವ ಮೂಲಕ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಚಾಲನೆ ಸಿಕ್ಕಿದೆ.
RRR ಚಿತ್ರದ ‘ನಾಟ್ಟು ನಾಟ್ಟು’ ಗೀತೆಗೆ ಆಸ್ಕರ್ ಪ್ರಶಸ್ತಿ ಪಡೆದ ಪದ್ಮಶ್ರೀ ಎಂ.ಎಂ. ಕೀರವಾಣಿ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಈ ಸಮಾರಂಭದಲ್ಲಿ ಚಿತ್ರಸಾಹಿತಿ ವೈರಮುತ್ತು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಕೆ.ಟಿ. ಕುಂಜುಮೋನ್, ‘ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಜೆಂಟಲ್ ಮ್ಯಾನ್ ಗಳಾಗಿರಬೇಕು ಎಂಬುದು ಈ ಚಿತ್ರದ ಆಶಯ. ನಾನು ಇದುವರೆಗೂ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. 200ಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿದ್ದೇನೆ. ನನಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡುತ್ತಿದ್ದೇವೆ. ನನಗೆ ಪ್ರೇಕ್ಷಕರು ಗುರುಸಮಾನರು. ಅವರು ಚಿತ್ರ ನೋಡಿ ಆಶೀರ್ವಾದ ಮಾಡಿದರಷ್ಟೇ ನಾವು ಗೆಲ್ಲುವುದಕ್ಕೆ ಸಾಧ್ಯ. ಹಾಗಾಗಿ, ಅವರಿಗೆ ಇಷ್ಟವಾಗುವಂತಹ ಚಿತ್ರ ಮಾಡುವುದು ನನ್ನ ಮೊದಲ ಆದ್ಯತೆ’ ಎಂದರು.
ಈ ಚಿತ್ರ ಮಾಡುವುದಕ್ಕೆ ಎಂ.ಎಂ. ಕೀರವಾಣಿ ಅವರು ಮುಖ್ಯ ಕಾರಣ ಎಂದ ಕುಂಜುಮೋನ್, ‘ಈ ಚಿತ್ರಕ್ಕೆ ಸಂಗೀತ ಸಂಯೋಜಿಸಬೇಕು ಎಂದು ನಾನು ಅವರ ಬಳಿ ಕೇಳಿಕೊಂಡಾಗ, ಹೈದರಾಬಾದ್ ಗೆ ಬರುವುದಕ್ಕೆ ಹೇಳಿದರು. ನಾನು ಹೈದರಾಬಾದ್ ಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಅವರು ಚಿತ್ರದ ತಾರಾಗಣದ ಬಗ್ಗೆಯಾಗಲೀ, ತಂತ್ರಜ್ಞರ ಬಗ್ಗೆಯಾಗಲೀ ಒಂದೇ ಒಂದು ಮಾತನ್ನೂ ಕೇಳಲಿಲ್ಲ. ಅಡ್ವಾನ್ಸ್ ಸಹ ಪಡೆಯಲಿಲ್ಲ. ಈ ಚಿತ್ರವನ್ನು ನಿಮಗಾಗಿ ಮಾಡುತ್ತಿದ್ದೇನೆ ಎಂದರು. ಅದೇ ರೀತಿ ಹಿರಿಯ ಚಿತ್ರಸಾಹಿತಿ ವೈರಮುತ್ತು ಸಹ ಅಡ್ವಾನ್ಸ್ ಪಡೆಯಲಿಲ್ಲ. ತಮಗೆ ಅವಶ್ಯಕತೆ ಇದ್ದಾಗ ಕೇಳುವುದಾಗಿ ಹೇಳಿದರು. ಅಷ್ಟೇ ಅಲ್ಲ, ಕೊಚ್ಚಿಯಲ್ಲಿ ನಡೆದ ಸಂಗೀತ ಸಂಯೋಜನೆಗೂ ಅವರು ತಮ್ಮ ದುಡ್ಡಿನಲ್ಲೇ ಬರುವುದಾಗಿ ಹೇಳಿದರು. ಅವರ ಗುಣ ನೋಡಿ ಹೃದಯ ತುಂಬಿಬಂತು’ ಎಂದು ಹೇಳಿದರು.
‘ಜಂಟಲ್ ಮ್ಯಾನ್ 2’ ಚಿತ್ರದಲ್ಲಿ ನಾಯಕನಾಗಿ ಚೇತನ್ ಚೀನು ಅಭಿನಯಿಸುತ್ತಿದ್ದು, ಅವರಿಗೆ ನಾಯಕಿಯರಾಗಿ ನಯನತಾರಾ ಚಕ್ರವರ್ತಿ ಹಾಗೂ ಪ್ರಿಯಾ ಲಾಲ್ ಅಭಿನಯಿಸುತ್ತಿದ್ದಾರೆ. ಮಿಕ್ಕಂತೆ ಕನ್ನಡ ನಟಿ ಸುಧಾರಾಣಿ, ಸಿತಾರಾ, ಸುಮನ್, ಸತ್ಯಪ್ರಿಯಾ ಸೇರಿದಂತೆ ಬೇರೆಬೇರೆ ಭಾಷೆಗಳ ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಅಜಯನ್ ವಿನ್ಸೆಂಟ್ ಅವರ ಛಾಯಾಗ್ರಹಣ, ತೋಟ ತಾರಿಣಿ ಅವರ ಕಲಾ ನಿರ್ದೇಶನವಿದೆ.
Be the first to comment