ಜಸ್ಟ್ ಮ್ಯಾರೀಡ್

Movie Review: ಪ್ರೇಮ ಸಂಬಂಧಗಳ ಹಿಂದಿನ ಅಸಲಿ ಕಥೆ

ಚಿತ್ರ : ಜಸ್ಟ್ ಮ್ಯಾರೀಡ್
ನಿರ್ದೇಶನ : ಸಿ ಆರ್ ಬಾಬಿ
ನಿರ್ಮಾಣ : ಅಜನೀಶ್ ಲೋಕನಾಥ್ ಮತ್ತು ಸಿ ಆರ್ ಬಾಬಿ
ತಾರಾಗಣ : ಶೈನ್ ಶೆಟ್ಟಿ, ಅಂಕಿತಾ ಅಮರ್, ದೇವರಾಜ್ ಮುಂತಾದವರು…
ರೇಟಿಂಗ್ : 3.5/5

ಅದು ನಾಡಿನ ಜನಪ್ರಿಯ ಕೂಡು ಕುಟುಂಬ. ನಿವೃತ್ತ ನ್ಯಾಯಾಧೀಶನ ಈ ಶ್ರೀಮಂತ ಕುಟುಂಬದಲ್ಲಿ ವೈದ್ಯರು, ರಾಜಕಾರಣಿ ಎಲ್ಲರೂ ಇದ್ದಾರೆ. ಆದರೆ ಇದು ಈ ವಂಶದ ಕುಡಿ ಯುವ ಜಾಹೀರಾತು ನಿರ್ದೇಶಕ ಸೂರ್ಯನ ಬದುಕಿನ ಕಥೆ. ಆದರೆ ಈ ಸೂರ್ಯನ ಮದುವೆಯಲ್ಲಿ ಅದೆಷ್ಟು ಗ್ರಹಗತಿಗಳ ನೆರಳು ಬೆಳಕು ಬಯಲಾಗುವುದು ಎನ್ನುವುದೇ ಚಿತ್ರದ ಪ್ರಮುಖ ಅಂಶ.‌ ಇವೆಲ್ಲದರ ಮಧ್ಯೆ ಸೂರ್ಯನ ವೈವಾಹಿಕ ಬದುಕು ಏನಾಗಲಿದೆ ಎನ್ನುವುದನ್ನು ಕುತೂಹಲಕಾರಿಯಾಗಿ ಪ್ರಸ್ತುತ ಪಡಿಸಿದೆ ಜಸ್ಟ್ ಮ್ಯಾರೀಡ್.

ಸೂರ್ಯ ವೃತ್ತಿಯಲ್ಲಿ ಆ್ಯಡ್ ಫಿಲ್ಮ್ ಡೈರೆಕ್ಟರ್. ಆದರೆ ಹುಡುಗಿಯರೆಂದರೆ ವಿಪರೀತ ಅಕ್ಕರೆ. ಸೂರ್ಯನ ಈ ಕಾರ್ಯಕಲಾಪಗಳನ್ನು ಅರಿತಿರುವ ಸುಂದರಿಯೇ ಸಪ್ತಪದಿ ತುಳಿಯಲು ಸೈ ಎನ್ನುತ್ತಾಳೆ. ಸದಾ ಭ್ರಮಾಲೋಕದಲ್ಲಿ ಕಳೆದುಹೋಗುವ ಸೂರ್ಯನಿಗೆ ಇದು ನಿಜವೇ ಸುಳ್ಳೇ ಎನ್ನುವುದೇ ಸದ್ಯದ ಸಂದೇಹ. ನಿಜವೆಂದು ಅರಿವಾಗುವ ಹೊತ್ತಲ್ಲೇ ಪತ್ನಿಯಾಗ ಬಂದವಳು ಸಂಬಂಧಕ್ಕೆ ಹೊಸ ನಿಬಂಧನೆಗಳನ್ನು ಹಾಕುತ್ತಾಳೆ. ಸೂರ್ಯ ಈ ನಿಬಂಧನೆಗಳನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದೇ ಚಿತ್ರದ ಕುತೂಹಲಕಾರಿ ಅಂಶ.

ಚಿತ್ರಕಥೆಯ ಪ್ರಕಾರ ಪ್ರಮುಖ ತಿರುವ ಸೂರ್ಯ ಮತ್ತು ಸಹನಾ ಮದುವೆಯಿಂದಲೇ ಶುರುವಾಗುತ್ತದೆ. ಸೂರ್ಯನಾಗಿ ಶೈನ್ ಶೆಟ್ಟಿಗೆ ಹಲವು ರೀತಿಯ ಭಾವಾಭಿವ್ಯಕ್ತಿ ಮಾಡಲು ಸಾಧ್ಯವಾಗಿದೆ. ಆರಂಭದಲ್ಲಿ ಫ್ಲರ್ಟ್ ಯುವಕನಾಗಿ ಬಳಿಕ ಕುಟುಂಬದ ಮಾನ ಕಾಯಲು ಮುಂದಾಗುವ ಜವಾಬ್ದಾರಿಯುತ ಸದಸ್ಯನಾಗಿ ಶೈನ್ ನಟನೆ ಮನಸು ಗೆಲ್ಲುತ್ತದೆ. ಆ್ಯಕ್ಷನ್ ದೃಶ್ಯಗಳಲ್ಲಿಯೂ ಶೈನ್ ಕಾಣಿಸಿಕೊಂಡಿರುವ ರೀತಿ ಆಕರ್ಷಕವಾಗಿದೆ. ಶೈನ್ ಗೆ ಜೋಡಿಯಾಗಿ ಸಹನಾ ಪಾತ್ರವನ್ನು ನಿರ್ವಹಿಸಿರುವ ಅಂಕಿತಾ ನಟನೆ ಉತ್ತಮ ಅಂಕ ಗಳಿಸಿದೆ. ಈಕೆಯನ್ನು ಕನ್ನಡದ ಭರವಸೆಯ ನಟಿಯೆಂದು ಪರಿಗಣಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ನಾಯಕ, ನಾಯಕಿಯ ಹೊರತಾಗಿಯೂ ಚಿತ್ರದಲ್ಲಿ ಕೂಡು ಕುಟುಂಬಕ್ಕೆ ತಕ್ಕಂತೆ ದಿಗ್ಗಜ‌ ಕಲಾವಿದರ ಸಂಗಮವೇ ನಡೆದಿದೆ. ಈ ತುಂಬಿದ ಮನೆ ಹಿರಿಯಜ್ಜನಾಗಿ ಡೈನಾಮಿಕ್ ಸ್ಟಾರ್ ದೇವರಾಜ್ ನಟಿಸಿದ್ದಾರೆ‌.‌ ಇಂಥದೊಂದು ಎಂಟ್ರಿಕೊಡುವ ನವಜಾತ ಶಿಶುವಿನ ಎಂಟ್ರಿಗೆ ಕಾರಣವಾಗುವ ಅನೂಪ್ ಭಂಡಾರಿ, ಶ್ರುತಿ ಹರಿಹರನ್ ಪಾತ್ರಗಳು ಕೂಡ ಮನ ಸೆಳೆಯುತ್ತದೆ. ತಮಿಳು ನಟ ಶ್ರೀಮನ್ ಸಿಕ್ಕ ಅವಕಾಶದಲ್ಲೇ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಚ್ಯುತ್ ಕುಮಾರ್, ರವಿಶಂಕರ್ ಗೌಡ ಸೇರಿದಂತೆ ಚಿತ್ರದ ತುಂಬ ಪ್ರತಿಭಾವಂತ ಕಲಾವಿದರ ದಂಡೇ ಇದೆ. ವಿಶೇಷ ಪಾತ್ರದಲ್ಲಿ ಎಂಟ್ರಿ‌ಕೊಡುವ ಶ್ರುತಿ ತಮ್ಮ ಲುಕ್ ಮೂಲಕವೇ ಕುತೂಹಲ ಸೃಷ್ಟಿಸುತ್ತಾರೆ. ನಾಯಕಿಯ ತಂದೆಯಾಗಿ ರವಿಭಟ್, ಕೂಡು ಕುಟುಂಬದ ಸದಸ್ಯೆಯಾಗಿ ಕಾಣಿಸಿರುವ ಗಾಯಕಿ ವಾಣಿ ಹರಿಕೃಷ್ಣ ಮೊದಲಾದವರು ಪಾತ್ರಗಳಾಗಿಯೇ ನೆನಪಲ್ಲಿ ಉಳಿಯುತ್ತಾರೆ.

ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತದಲ್ಲಿ ಆಕರ್ಷಣೆ ಮೂಡಿಸಿ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ. ಈ ಎಲ್ಲ ಕಾರಣದಿಂದಲೇ ನಿರೀಕ್ಷೆ ಸೃಷ್ಟಸಿದ್ದ ಚಿತ್ರ ಇದೀಗ ಪ್ರೇಕ್ಷಕರ ಮನಗೆಲ್ಲುವಂತಾಗಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!