“ಜಸ್ಟ್ ಮ್ಯಾರೀಡ್” ತಂಡ “ಕೇಳೋ ಮಚ್ಚಾ” ಎಂಬ ಎರಡನೇ ಗೀತೆಯನ್ನು ಇಂದು ಘೋಷಿಸಿದೆ. “ಅಭಿಮಾನಿಯಾಗಿ ಹೋದೆ” ಎಂಬ ಮಾಧುರ್ಯ ಪ್ರಧಾನ ಗೀತೆಯ ನಂತರ ಇದೀಗ ಒಂದು ಪಾರ್ಟಿ ಗೀತೆಯನ್ನು ಘೋಷಿಸುವ ಮೂಲಕ ಮತ್ತೊಮ್ಮೆ ಸಿನಿ ಪ್ರಿಯರಲ್ಲಿ ಕುತೂಹಲವನ್ನು ಸೃಷ್ಟಿಸಿದೆ. ಒಟ್ಟಾರೆ “ಜಸ್ಟ್ ಮ್ಯಾರೀಡ್” ಹಾಡುಗಳು ವಿವಿಧ ಭಾವನೆಗಳನ್ನು ಬಿಂಬಿಸುವ ವಿವಿಧ ಪ್ರಕಾರಗಳಲ್ಲಿ ಇರಬಹುದು ಎಂಬುದು ಸಿನಿಪ್ರಿಯರ ಊಹೆ. “ಕೇಳೋ ಮಚ್ಚಾ” ಎಂಬ ಪಾರ್ಟಿ ಹಾಡನ್ನು ಇದೇ ಜನವರಿ 14ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಡಿಜಿಟಲ್ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಇಂದು ಘೋಷಿಸಿದೆ. ಈ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ರಚನೆ ಮಾಡಿದ್ದು,ನಕಾಶ್ ಅಜ಼ೀಜ಼್ ಹಾಡಿರುತ್ತಾರೆ.
ಸಿ. ಆರ್ ಬಾಬಿ ನಿರ್ದೇಶನದ “ಜಸ್ಟ್ ಮ್ಯಾರೀಡ್” ಕೌಟುಂಬಿಕ ಬಾಂಧವ್ಯಗಳ ಮೌಲ್ಯವನ್ನು ತಿಳಿಸುವ ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದ್ದು, ಇದರಲ್ಲಿ ಶೈನ್ ಶೆಟ್ಟಿ, ಅಂಕಿತಾ ಅಮರ್, ಶೃತಿ ಹರಿಹರನ್, ದೇವರಾಜ್, ಶ್ರುತಿ, ಅನೂಪ್ ಭಂಡಾರಿ, ಅಚ್ಯುತ್ ಕುಮಾರ್ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ಬಿ. ಅಜನೀಶ್ ಲೋಕ್ ನಾಥ್ ಸಂಗೀತ ಸಂಯೋಜನೆ ಮಾಡಿರುತ್ತಾರೆ, ಹಾಗು ಸಿ. ಆರ್ ಬಾಬಿ ಮತ್ತು ಬಿ. ಅಜನೀಶ್ ಲೋಕ್ ನಾಥ್ ಆಬ್ಸ್ ಸ್ಟೂಡಿಯೋಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುತ್ತಾರೆ.
Be the first to comment