ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ 1 ಚಿತ್ರದ ಶೂಟಿಂಗ್ ನಡೆಯುತ್ತಿದ್ದಾಗ ಜೂನಿಯರ್ ಆರ್ಟಿಸ್ಟ್ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ತೆರಳಿದ್ದಾಗ ಕಪಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೇ 6ರಂದು ಚಿತ್ರದ ದಿನದ ಚಿತ್ರೀಕರಣ ಮುಗಿದ ಮೇಲೆ ಕಪಿಲ್ ತಮ್ಮ ತಂಡದ ಇತರ ಸದಸ್ಯರೊಂದಿಗೆ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿದ್ದಾಗ ನೀರಿನ ಆಳ ತಿಳಿಯದೇ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಸಂಜೆ 4 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿತ್ತು. ಅವರ ಜೊತೆಗೆ ಈಜಲು ಹೋಗಿದ್ದವರು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜುಪಟುಗಳೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ರಾತ್ರಿ 7 ಗಂಟೆಯ ಸುಮಾರಿಗೆ ಕಪಿಲ್ ಅವರ ಶವವನ್ನು ಪತ್ತೆ ಮಾಡಿ ನದಿಯಿಂದ ಹೊರಗೆಳೆದಿದ್ದಾರೆ.
ಕಪಿಲ್ ಅವರ ಪಾರ್ಥೀವ ಶರೀರವನ್ನು ಬೈಂದೂರಿನ ಸರ್ಕಾರಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಅವರ ಕುಟುಂಬಸ್ಥರು ಬಂದ ನಂತರ ಕಪಿಲ್ ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಈ ಮೊದಲು ಶೂಟಿಂಗ್ ಮಾಡುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ದೂರು ದಾಖಲಾಗಿತ್ತು. ದೈವ ನುಡಿದಂತೆ ಕಾಂತಾರಾ -1 ಚಿತ್ರೀಕರಣಕ್ಕೆ ಸಂಕಷ್ಟ ಎದುರಾದಂತಾಗಿದೆ.
—-

Be the first to comment