ಜಂಬೂ ಸರ್ಕಸ್

Movie Review: ಸ್ನೇಹಿತರ ಸರ್ಕಸ್ ನಲ್ಲಿ ಫ್ಯಾಮಿಲಿ ತುಂಬ ಜೋಕರ್ಸ್!

ಚಿತ್ರ: ಜಂಬೂ ಸರ್ಕಸ್
ನಿರ್ದೇಶಕರು: ಎಂ.ಡಿ ಶ್ರೀಧರ್
ನಿರ್ಮಾಪಕರು: ಎಚ್.ಸಿ ಸುರೇಶ್
ತಾರಾಗಣ: ಪ್ರವೀಣ್ ತೇಜ್, ಅಂಜಲಿ ಅನೀಶ್, ಅಚ್ಯುತ್ ಕುಮಾರ್ ಮೊದಲಾದವರು.
ರೇಟಿಂಗ್: 3.5/5

ಇದು ಇಬ್ಬರು ಆಪ್ತ ಸ್ನೇಹಿತರ ಕಥೆಯಿಂದ ಆರಂಭವಾಗಿ ಅವರಿಬ್ಬರ ಮಕ್ಕಳ ಪ್ರೇಮಕಥೆಯ ತನಕ ಮುಂದುವರಿಯುವ ಸಿನಿಮಾ. ಇಂಥ ಕಥೆಗಳು ಸಾಕಷ್ಟು ಬಂದಿವೆ ಎನ್ನುವ ಅನಿಸಿಕೆ ನಿಮ್ಮದಾದರೆ ಅದು ಸುಳ್ಳು. ಚಿತ್ರದ ಆರಂಭದಲ್ಲೇ ಇದಕ್ಕೊಂದು ಟ್ವಿಸ್ಟ್ ಇದೆ. ಆ ತಿರುವೇ ಚಿತ್ರವನ್ನು ಕೊನೆಯ ತನಕ ಕುತೂಹಲಕಾರಿಯಾಗಿ ಕೊಂಡೊಯ್ಯುತ್ತದೆ.

ಶಾಲಾ ವಿದ್ಯಾರ್ಥಿಗಳಾಗಿದ್ದಾಗಲೇ ಶುರುವಾದ ಸ್ನೇಹ. ಹುಡುಗರಿಬ್ಬರ ಆತ್ಮೀಯತೆ ಅದು ಯಾವ ಮಟ್ಟಕ್ಕೆ ಮುಂದುವರಿಯುತ್ತದೆ ಅಂದರೆ ಯುವಕರಾದ ಬಳಿಕ ಇಬ್ಬರೂ ಒಂದೇ ದಿನ, ಒಂದೇ ಕಲ್ಯಾಣ ಮಂಟಪದಲ್ಲಿ ತಾಳಿಕಟ್ಟುತ್ತಾರೆ. ಒಬ್ಬನ‌ ಮನೆಯಲ್ಲಿ ಹೆಣ್ಣು ಮಗುವನ್ನು ಬಯಸಿದರೆ ಮತ್ತೋರ್ವನ ಮನೆಯಲ್ಲಿ ಗಂಡು ಮಗುವಿಗಾಗಿ ಭಾರೀ ನಿರೀಕ್ಷೆ. ಇಬ್ಬರ ಪತ್ನಿಯರಿಗೂ ಕೂಡ ಒಂದೇ ದಿನ ಒಂದೇ ಆಸ್ಪತ್ರೆಯಲ್ಲೇ ಪ್ರಸವವಾಗುತ್ತದೆ. ವಿಪರ್ಯಾಸ ಎನ್ನುವಂತೆ ಗಂಡು ಬಯಸಿದಾಕೆಗೆ ಹೆಣ್ಣು ಮಗುವೂ ಹೆಣ್ಣು ಬಯಸಿದಾಕೆಗೆ ಗಂಡು ಮಗುವೂ ಜನಿಸುತ್ತದೆ. ತಮ್ಮ ಮನೆಯವರನ್ನು ಸಮಾಧಾನಗೊಳಿಸಲು ಸ್ನೇಹಿತರಿಬ್ಬರೂ ಸೇರಿ ವಿಚಿತ್ರವಾದ ತೀರ್ಮಾನ ಕೈಗೊಳ್ಳುತ್ತಾರೆ. ಇಬ್ಬರ ಹೊರತು ಬೇರೆ ಯಾರಿಗೂ ತಿಳಿಯದಂತೆ ಮಗುವನ್ನು ಬದಲಾಯಿಸಲು ತೀರ್ಮಾನಿಸುತ್ತಾರೆ. ಮಕ್ಕಳು ಬೆಳೆದ ಮೇಲೆ ಅವರಿಬ್ಬರೂ ಒಂದಾಗಬೇಕು ಎಂದು ಕನಸು ಕಾಣುತ್ತಾರೆ. ಆದರೆ ಮುಂದೊಂದು ದಿನ ಇಬ್ಬರ ಪತ್ನಿಯರು ಕೂಡ ಮುನಿಸಿಕೊಳ್ಳುತ್ತಾರೆ. ಎರಡು ಕುಟುಂಬಗಳ‌ ಮಧ್ಯೆ ವೈರತ್ವ ಸೃಷ್ಟಿಯಾಗುತ್ತದೆ. ಆದರೂ ಇಬ್ಬರನ್ನೂ ಒಂದು ಮಾಡಬೇಕು ಎನ್ನುವ ಸ್ನೇಹಿತರ ಪ್ರಯತ್ನ ಮುಂದುವರಿಯುತ್ತದೆ. ಕಾಲೇಜು ತಲುಪಿದರೂ ಪರಸ್ಪರ ದ್ವೇಷಿಸುವ ತಮ್ಮ ಮಕ್ಕಳನ್ನು ಒಂದು ಮಾಡುವುದು ಹೇಗೆ ಎನ್ನುವುದು ಸ್ನೇಹಿತರ ಚಿಂತೆಯಾಗಿರುತ್ತದೆ. ಆದರೆ ಮಕ್ಕಳಿಬ್ಬರನ್ನೂ ಪ್ರೇಮಿಗಳಾಗುವಂತೆ ಮಾಡುವ ಆ ಸಂದರ್ಭ ಯಾವುದು? ಆದರೆ ಅಮ್ಮಂದಿರನ್ನು ಒಪ್ಪಿಸುವುದು ಹೇಗೆ? ಮಕ್ಕಳು ಅದಲು ಬದಲಾದ ಸತ್ಯ ಅರಿವಾದಾಗ ಪತ್ನಿಯರ ಪ್ರತಿಕ್ರಿಯೆ ಏನು? ಇವೆಲ್ಲ ಭಾವಗಳಿಗೆ ಕನ್ನಡಿ ಹಿಡಿಯುವ ಹಾಸ್ಯಮಯ ಸಿನಿಮಾ ಜಂಬೂ ಸರ್ಕಸ್.

ಸ್ವಂತ ಮಕ್ಕಳನ್ನೇ ಬದಲಾಯಿಸಬಲ್ಲ ಆಪ್ತಮಿತ್ರರಾಗಿ ಅಚ್ಯುತ್ ಕುಮಾರ್ ಮತ್ತು ರವಿಶಂಕರ್ ಗೌಡ ಕಾಣಿಸಿದ್ದಾರೆ. ಇವರಿಬ್ಬರ ಮಕ್ಕಳಾಗಿ ಪ್ರವೀಣ್ ತೇಜ್ ಮತ್ತು ಅಂಜಲಿ ಅನೀಶ್ ನಟಿಸಿದ್ದಾರೆ. ಒಬ್ಬ ಯುವ ನಾಯಕನಿಗೆ ಬೇಕಾದ ಎಲ್ಲ ಗುಣಗಳನ್ನು ಹೊಂದಿರುವ ಪ್ರವೀಣ್ ತೇಜ್ ಯಾಕೆ ಇನ್ನೂ ಸ್ಟಾರ್ ಪಟ್ಟ ಸೇರಿಲ್ಲ ಎನ್ನುವ ಪ್ರಶ್ನೆ ಚಿತ್ರ ನೋಡಿದವರಿಗೆ ಕಾಡಿದರೆ ಸುಳ್ಳಲ್ಲ. ಒಂದು ಕಡೆ ತುಂಟ ಕಾಲೇಜ್ ಹುಡುಗನಾಗಿ ಸೆಳೆದಂತೆ, ವೇದಿಕೆ ಮೇಲಿನ ಪೌರಾಣಿಕ ಪಾತ್ರದಲ್ಲಿಯೂ ಆಕರ್ಷಣೆ ಮೂಡಿಸುತ್ತಾರೆ.

ಯೋಗರಾಜ ಭಟ್ಟರ ‘ಮನದ ಕಡಲು’ ಸಿನಿಮಾದಲ್ಲಿ ಪ್ರೇಕ್ಷಕರ ‌ಮನಗೆದ್ದ ನಟಿ ಅಂಜಲಿ ಅನೀಶ್ ಜಂಬೂ ಸರ್ಕಸ್ ಗೆ ನಾಯಕಿಯಾಗಿದ್ದಾರೆ.

ನಾಯಕ ಪ್ರವೀಣ್ ತೇಜ್ ಗೆ ತಾಯಿಯಾಗಿ ಕಿರುತೆರೆ ನಟಿ ಸ್ವಾತಿ ಆಕರ್ಷಕವಾದ ಪಾತ್ರ ನಿಭಾಯಿಸಿದ್ದಾರೆ. ಮಾಜಿ ಮಿಲಿಟರಿ ಅಧಿಕಾರಿಯಾಗಿ ಅವಿನಾಶ್ ಕ್ಕೈಮ್ಯಾಕ್ಸ್ ದೃಶ್ಯವನ್ನು ತಮ್ಮ ಕೈಗೆತ್ತಿಕೊಂಡಿದ್ದಾರೆ. ಹಿರಿಯ‌ನಟಿ ಆಶಾಲತಾ ಅಜ್ಜಿ ಪಾತ್ರದಲ್ಲಿ ಆಹಾ ಎನ್ನುವಂಥ ನಟನೆ ನೀಡಿದ್ದಾರೆ. ಛಾಯಾಗ್ರಹಣ, ನಿರ್ದೇಶನ , ಹಾಡುಗಳು, ನೃತ್ಯ ನಿರ್ದೇಶನ, ಸಾಹಸ ಪ್ರತಿಯೊಂದು ಕೂಡ ಪ್ರಭಾವಶಾಲಿಯಾಗಿದೆ. ಒಂದು ಕೌಟುಂಬಿಕ ಹಾಸ್ಯಮಯ ಸಿನಿಮಾ‌ ನೋಡಲು ಬಯಸುವವರು ಈ ಚಿತ್ರವನ್ನು ತಪ್ಪಿಸಿಕೊಳ್ಳಲೇಬಾರದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!