ಸಿನಿಮಾ ವಿಮರ್ಶೆ : ಹೆಣ್ಣಿನ ಸ್ವಾಭಿಮಾನದ ವಿರಾಟ ರೂಪ “ಜೂಲಿಯೆಟ್ 2″
ಚಿತ್ರ: “ಜೂಲಿಯೆಟ್ 2″
ನಿರ್ದೇಶನ: ವಿರಾಟ್ ಬಿ. ಗೌಡ
ತಾರಾಗಣ: ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ
ರೇಟಿಂಗ್: 3/5
ಹೆಣ್ಣು ತನ್ನ ಮಾನ ಮತ್ತು ಸ್ವಾಭಿಮಾನಕ್ಕೆ ತೊಂದರೆಯಾದರೆ ಆಕೆಯ ವಿರಾಟ ರೂಪ ದರ್ಶನ ಯಾವ ರೀತಿ ಇರುತ್ತದೆ ಎನ್ನುವುದನ್ನು “ಜೂಲಿಯೆಟ್ 2′ ತೋರಿಸುತ್ತದೆ.
ತಂದೆಯ ಸಾವಿನ ಬಳಿಕ ಅವರ ಕೊನೆಯ ಆಸೆಯನ್ನು ಈಡೇರಿಸಲು ಜೂಲಿಯೆಟ್, ತಾನು ಹುಟ್ಟಿ ಬೆಳೆದ ಊರಿಗೆ ಬರುತ್ತಾಳೆ. ಆಕೆ ಬರುವ ವೇಳೆಗೆ ಸಂಪೂರ್ಣ ಊರಿನ ಚಿತ್ರಣವೇ ಬದಲಾಗಿರುತ್ತದೆ. 
ತಾನು ಆಟವಾಡಿ ಬೆಳೆದ ಮನೆಯಲ್ಲೇ ಆಕೆಯ ಮಾನ, ಪ್ರಾಣ ಎರಡಕ್ಕೂ ಕುಂದು ತರುವ ಘಟನೆಗಳು ಎದುರಾಗುತ್ತದೆ. ಊರಿಗೆ ಹಿಂತಿರುಗಿದಾಗ ಅವಳ ಮೇಲೆ ದರೋಡೆ ಯತ್ನ ನಡೆಯುತ್ತದೆ. ಇದೆಲ್ಲವನ್ನು ದಿಟ್ಟವಾಗಿ ಎದುರಿಸುವ ಜೂಲಿಯೆಟ್ ಅಂತಿಮವಾಗಿ, ತನ್ನ ತಂದೆಯ ಕನಸನ್ನು ಈಡೇರಿಸುವಳೇ ಎನ್ನುವುದು “ಜೂಲಿಯೆಟ್ 2′ ಚಿತ್ರದ ಕಥೆ.
ಜೂಲಿಯೆಟ್ 2′ ಮಹಿಳಾ ಪ್ರಧಾನ ಕಥೆ ಹೊಂದಿದ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಸಿನಿಮಾದ ಕಥೆ ನಾಯಕಿ “ಜೂಲಿಯೆಟ್’ ಸುತ್ತ ನಡೆಯುತ್ತದೆ. “ಜೂಲಿಯೆಟ್’ ಪಾತ್ರದಲ್ಲಿ ಬೃಂದಾ ಆಚಾರ್ಯ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. ಆ್ಯಕ್ಷನ್, ಎಮೋಶನ್ಸ್ ಎಲ್ಲ ದೃಶ್ಯಗಳಲ್ಲೂ ಬೃಂದಾ ಫುಲ್ ಮಾರ್ಕ್ಸ್ ಪಡೆಯುತ್ತಾರೆ.
ಸಿನಿಮಾದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿ ಬಂದಿದೆ. ಸುಂದರವಾದ ಲೊಕೇಶನ್ಸ್ ಸಿನಿಮಾದ ಪ್ಲಸ್ ಪಾಯಿಂಟ್. ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟ ಪಡುವವರಿಗೆ “ಜೂಲಿಯೆಟ್ 2′ ಖುಷಿ ನೀಡಬಹುದು.
____

Be the first to comment