ಎನ್‌ಟಿಆರ್‌

ಜೂ. ಎನ್‌ಟಿಆರ್‌, ಪ್ರಶಾಂತ್‌ ನೀಲ್‌ ಸಿನಿಮಾ 2026ಕ್ಕೆ ರಿಲೀಸ್‌

ತೆಲುಗಿನ ಮ್ಯಾನ್ ಆಫ್ ಮಾಸಸ್ ಜೂನಿಯರ್‌ ಎನ್‌ಟಿಆರ್‌ ಮತ್ತು ನಿರ್ದೇಶಕ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ “#NTRNeel” ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾ, ಇನ್ನೇನು 2026ರ ಜೂನ್‌ನಲ್ಲಿ ತೆರೆಗೆ ಬರಲಿದೆ. ಈಗಾಗಲೇ ಶೂಟಿಂಗ್‌ ಹಂತದಲ್ಲಿರುವ ಈ ಸಿನಿಮಾ, ಅಷ್ಟೇ ವೇಗವಾಗಿ ಚಿತ್ರೀಕರಣದಲ್ಲಿಯೂ ನಿರತವಾಗಿದ್ದು, ಅಧಿಕೃತವಾಗಿ ರಿಲೀಸ್‌ ದಿನಾಂಕ ಘೋಷಣೆ ಮಾಡಿದೆ.

“ಕೆಜಿಎಫ್‌” ಸರಣಿ ಮತ್ತು “ಸಲಾರ್‌” ಮೂಲಕ ಈಗಾಗಲೇ ನಿರೀಕ್ಷೆಗೆ ಕಿಚ್ಚು ಹಚ್ಚಿರುವ ಪ್ರಶಾಂತ್‌ ನೀಲ್‌, ಈ ಮೆಗಾ ಪ್ರಾಜೆಕ್ಟ್‌ ಮೂಲಕ ಆಗಮಿಸಲು ಸಿದ್ಧರಾಗಿದ್ದಾರೆ. ಈ ನಡುವೆ ಇದೇ ಸಿನಿಮಾದ ಬಿಡುಗಡೆ ದಿನಾಂಕದ ಅಧಿಕೃತ ಘೋಷಣೆ ಆಗಿದ್ದು, 2026ರ ಜೂನ್‌ 25ರಂದು ಚಿತ್ರಮಂದಿರಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು NTR ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿ ಕೃಷ್ಣ ಕೊಸರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈಗಾಗಲೇ ಕೇವಲ ಫಸ್ಟ್‌ ಲುಕ್‌ ಮೂಲಕವೇ ಈ ಆಕ್ಷನ್‌ ಪ್ಯಾಕ್ಡ್‌ ಸಿನಿಮಾ ಸುದ್ದಿಯಾಗಿತ್ತು. ಆದರೆ, ಹೆಚ್ಚಿನ ಅಪ್‌ಡೇಟ್‌ ಮಾತ್ರ ಹೊರಬಿದ್ದಿರಲಿಲ್ಲ. ಇದೀಗ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ ಸಿನಿಮಾ ಮೇಕರ್ಸ್‌. ಮೂಲ ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಭುವನ್ ಗೌಡ ಛಾಯಾಗ್ರಹಣವನ್ನು ನಿರ್ವಹಿಸಿದರೆ, ರವಿ ಬಸ್ರೂರ್ ಸಂಗೀತ ಸಂಯೋಜಿಸುತ್ತಾರೆ. ನಿರ್ಮಾಣ ವಿನ್ಯಾಸ ಚಲಪತಿ ಅವರದ್ದಾಗಿದೆ.

ಈಗಾಗಲೇ ಎನ್‌ಟಿಆರ್‌ ಅಭಿಮಾನಿಗಳ ವಲಯದಲ್ಲಿ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಅದರಲ್ಲೂ ಪ್ರಶಾಂತ್‌ ನೀಲ್‌ ತಮ್ಮ ಆಕ್ಷನ್‌ ಸಿನಿಮಾಗಳ ಮೂಲಕವೇ ಹೆಚ್ಚು ಸದ್ದು ಮಾಡಿದವರು. ಇತ್ತ ಎನ್‌ಟಿಆರ್‌ ತಮ್ಮ ನಟನೆ ಮತ್ತು ಆಕ್ಷನ್‌ ಮೂಲಕವೇ ಸುದ್ದಿಯಾದವರು. ಈಗ ಈ ನಟ ಮತ್ತು ನಿರ್ದೇಶಕರ ಕಾಂಬಿನೇಷನ್‌ನ ಸಿನಿಮಾ ಅದ್ಯಾವ ಮಟ್ಟದಲ್ಲಿ ಮೂಡಿಬರಲಿದೆ ಎಂಬುದಕ್ಕೆ ಇನ್ನಷ್ಟು ತಿಂಗಳು ಕಾಯಲೇಬೇಕು.

Be the first to comment

Leave a Reply

Your email address will not be published. Required fields are marked *

Translate »
error: Content is protected !!