ಲವ್ಲೀ ಸ್ಟಾರ್’ ಪ್ರೇಮ್ ನಟನೆಯ 25ನೇ ಸಿನಿಮಾ “ಪ್ರೇಮಂ ಪೂಜ್ಯಂ” ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಈ ಚಿತ್ರದ ಮೇಕಿಂಗ್ ಬಗೆಗಿನ ನಿರ್ದೇಶಕರ ಅನುಭವಗಳ ವಿಡಿಯೋ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಮಾಸ್ಟರ್ ಆನಂದ್ ಜೊತೆಗೆ ನಡೆಸಿದ ಮಾತುಕತೆಯಲ್ಲಿ ಚಿತ್ರದ ನಿರ್ದೇಶಕ ಡಾ. ಬಿ. ಎಸ್. ರಾಘವೇಂದ್ರ ಅವರು, ಚಿತ್ರ ಸೆಟ್ ಏರುವ ಮುನ್ನ ಪ್ರೇಮ್ ಅವರನ್ನು ಮೀಟ್ ಮಾಡಿದ ಅನುಭವ, ವೈದ್ಯರಾದವರು ಸಿನಿಮಾ ಏನು ಮಾಡುತ್ತಾರೆ ಎನ್ನುವ ಬಗೆಗಿನ ಕಲಾವಿದರ ಧೋರಣೆ ಈ ಎಲ್ಲ ಆಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
” ಆಗ ಪ್ರೇಮ್ ಅವರು ಎಂಬತ್ತಕ್ಕೂ ಹೆಚ್ಚು ಕಥೆಗಳನ್ನು ರಿಜೆಕ್ಟ್ ಮಾಡಿದ್ದರು. ಅವರು ಕಥೆಯ ಎಳೆಯನ್ನು ಹತ್ತು ನಿಮಿಷದಲ್ಲಿ ವಿವರಿಸುವಂತೆ ಹೇಳಿದ್ದರು. ಆದರೆ ಕಥೆಯನ್ನು ಆಸಕ್ತಿಯಿಂದ ಕೇಳುತ್ತಾ ಅದು 45 ನಿಮಿಷ ದಾಟಿತು. ಅವರ ಮನೆಗೆ ಹೋಗಿ ಡೈಲಾಗ್ ಹೇಳಿದಾಗ 14 ಗಂಟೆಗೂ ಹೆಚ್ಚು ಕಾಲ ಕೇಳಿಸಿಕೊಂಡರು. ಸಿನಿಮಾದ ಡೈಲಾಗ್ ಪೂರ್ಣ ಕೇಳಿಸಿಕೊಳ್ಳಲು ಆಸಕ್ತರಾಗಿದ್ದ ಅವರು ಚಿತ್ರದ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳಲು ಫ್ಲೈಟ್ ಕ್ಯಾನ್ಸಲ್ ಮಾಡುವಂತೆ ಹೇಳಿದರು. ಅಲ್ಲಿಗೆ ಅವರು ಚಿತ್ರ ಒಪ್ಪಿಕೊಳ್ಳುತ್ತಾರೆ ಎನ್ನುವುದು ಗೊತ್ತಾಯಿತು” ಎಂದು ಮಾತುಕತೆಯಲ್ಲಿ ರಾಘವೇಂದ್ರ ತಮ್ಮ ಅನುಭವ ಹೇಳಿದ್ದಾರೆ.
ಹೊಸಬ ಎನ್ನುವ ಕಾರಣಕ್ಕೆ ಕಥೆಯನ್ನು ಮೇಲ್ ಮಾಡಿ ಎಂದ ಮಾಸ್ಟರ್ ಆನಂದ್ ಬಳಿಕ 18 ಅಧ್ಯಾಯಗಳನ್ನು ಒಂದೇ ರಾತ್ರಿ ಓದಿ ನಟಿಸಲು ಓಕೆ ಅಂದಿದ್ದು, ತಡವಾಗಿ ಬಂದ ಕಾರಣ ಬೇಗ ಕಥೆ ಹೇಳುವಂತೆ ಕೋಪದಿಂದ ಹೇಳಿದ ಛಾಯಾಗ್ರಾಹಕ ನವೀನ್ ಕುಮಾರ್ ಅವರು ಬಳಿಕ ರೋಮ್ಯಾಂಟಿಕ್ ಕಥೆಯನ್ನು ರಾತ್ರಿಯಿಡೀ ಫುಟ್ ಪಾತ್ ನಲ್ಲಿ ಕೇಳಿಸಿಕೊಂಡಿದ್ದು ಈ ರೀತಿಯ ಪ್ರಸಂಗಗಳು ಇಲ್ಲಿ ದಾಖಲಾಗಿದೆ. ಚಿತ್ರದ ಪೂರ್ವತಯಾರಿಯ ಹಲವಾರು ಸಾರಸ್ಯಕರ ಘಟನೆಗಳನ್ನು ವಿಡಿಯೋವಿವರಿಸುತ್ತಿದ್ದು 40 ಸಾವಿರಕ್ಕೂ ಹೆಚ್ಚು ಜನರು ಇದನ್ನು ವೀಕ್ಷಣೆ ಮಾಡಿದ್ದಾರೆ.
“ಪ್ರೇಮಂ ಪೂಜ್ಯಂ” ಚಿತ್ರದ ಫಸ್ಟ್ ಲುಕ್ ಒಳಗೊಂಡ ಟ್ರೈಲರ್ ಅಕ್ಟೋಬರ್ 14ರಂದು ಬಿಡುಗಡೆ ಆಗಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಒಟ್ಟು 12 ಹಾಡುಗಳು ಇರುವ ಈ ಚಿತ್ರದ ಹಾಡುಗಳು ಈಗಾಗಲೇ ಸಿನಿಮಾಸಕ್ತರ ಗಮನ ಸೆಳೆದಿವೆ. ಪ್ರೇಮ್ ಅವರು 9 ಡಿಫರೆಂಟ್ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು ಫಸ್ಟ್ ಲುಕ್ ಗೆ ಅಭಿಮಾನಿಗಳು ಕಾದಿದ್ದಾರೆ.
ಸಿನಿಮಾ ಅಕ್ಟೋಬರ್ 29ರಂದು ಬೆಳ್ಳಿತೆರೆಗೆ ಬರಲಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ಸಂಗೀತವನ್ನೂ ಡಾ. ಬಿ. ಎಸ್. ರಾಘವೇಂದ್ರ ನೀಡಿದ್ದಾರೆ. ಪ್ರೇಮ್ ಜೊತೆಗೆ ಬೃಂದಾ ಆಚಾರ್ಯ, ಐಂದ್ರಿತಾ ರೇ, ಸಾಧು ಕೋಕಿಲ, ಮಾಸ್ಟರ್ ಆನಂದ್, ಅನು ಪ್ರಭಾಕರ್, ಮಾಳವಿಕಾ ಅವಿನಾಶ್, ನಾಗಾಭರಣ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ರಕ್ಷಿತ್ ಕೆಡಂಬಾಡಿ, ಡಾ.ರಾಜ್ ಕುಮಾರ್ ಜಾನಕಿ ರಾಮನ್, ಡಾ. ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ಅವರು ಬಂಡವಾಳ ಹಾಕಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಚಿತ್ರಕ್ಕೆ ಇದೆ.
Be the first to comment