ಸ್ಟೈಲ್ ಕಾಪಿ ಮಾಡದಂತೆ ಹಕ್ಕುಸ್ವಾಮ್ಯ ಪಡೆದ ನಟ!

ಬಾಲಿವುಡ್ ನಟ ಜಾಕಿ ಶ್ರಾಫ್ ಅವರು ತಮ್ಮ ಸ್ಟೈಲ್, ಡೈಲಾಗ್​, ಹಾವಭಾವದ ಮೇಲೆ ಹಕ್ಕುಸ್ವಾಮ್ಯ ಸಾಧಿಸಿದ್ದು, ಅವರ ಸ್ಟೈಲ್ ಅನ್ನು ಯಾರೂ ನಕಲು ಮಾಡದಂತೆ ಹಕ್ಕುಸ್ವಾಮ್ಯವನ್ನು ಪಡೆದಿದ್ದಾರೆ.

ಅಮಿತಾಬ್ ಬಚ್ಚನ್ ಈಗಾಗಲೇ ಆ ರೀತಿಯ ಹಕ್ಕುಸ್ವಾಮ್ಯವನ್ನು ಪಡೆದಿದ್ದಾರೆ. ಅವರ ಶೈಲಿಯನ್ನು, ಯಾವುದೇ ಸಿನಿಮಾದ ಪಾತ್ರವನ್ನು ಯಾವುದೇ ಮಿಮಿಕ್ರಿ ಕಲಾವಿದರು ಸಹ ನಕಲು ಮಾಡುವಂತಿಲ್ಲ. ಈಗ ಜಾಕಿ ಶ್ರಾಫ್ ಇದೇ ರೀತಿಯ ಹಕ್ಕುಸ್ವಾಮ್ಯ ಪಡೆದುಕೊಂಡಿದ್ದಾರೆ.

ಜಾಕಿ ಶ್ರಾಫ್ ಅವರ ವ್ಯಕ್ತಿತ್ವ, ಹೆಸರು, ಧ್ವನಿ, ಚಿತ್ರ, ಹೋಲಿಕೆ, ನಡವಳಿಕೆ, ಸನ್ನೆಗಳು, ಸಂಭಾಷಣೆಗಳು ಮತ್ತು ಇತರ ಗುರುತಿಸಬಹುದಾದ ಗುಣಲಕ್ಷಣಗಳಂತಹ ವಿಶಿಷ್ಟ ಲಕ್ಷಣಗಳನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ, ಮಾರುಕಟ್ಟೆ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತಿಲ್ಲ ಎಂದು ಉಚ್ಚ ನ್ಯಾಯಾಲಯ ಆದೇಶಿಸಿದೆ.

ಹೆಸರು, ಧ್ವನಿ, ಚಿತ್ರ, ಹೋಲಿಕೆ, ನಡವಳಿಕೆ, ಸನ್ನೆಗಳು, ಸಂಭಾಷಣೆಗಳು ಇನ್ನಿತರ ಗುಣಲಕ್ಷಣಗಳು ಆ ವ್ಯಕ್ತಿಯ ‘ವ್ಯಕ್ತಿತ್ವ ಹಕ್ಕುಗಳು’ ಮತ್ತು ‘ಪ್ರಚಾರ ಹಕ್ಕುಗಳನ್ನು’ ಒಳಗೊಳ್ಳುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಈ ಗುಣಲಕ್ಷಣಗಳನ್ನು ಅನಧಿಕೃತವಾಗಿ ವಾಣಿಜ್ಯ ಬಳಕೆ ಮಾಡುವುದರಿಂದ ‘ವ್ಯಕ್ತಿತ್ವ ಹಕ್ಕುಗಳು’ ಮತ್ತು ‘ಪ್ರಚಾರ ಹಕ್ಕುಗಳನ್ನು’ ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇತ್ತೀಚೆಗೆ ಬಂದ ‘ಮೇಕ್ ಮೈ ಟ್ರಿಪ್’ನ ಜಾಹೀರಾತಿನಲ್ಲಿ ಜಾಕಿ ಶ್ರಾಫ್​ರ ನಕಲಿ ಧ್ವನಿ, ಅವರ ಹಾವಭಾವ ಬಳಸಲಾಗಿದೆ. ಕಪಿಲ್ ಶರ್ಮಾ ಶೋ ಸೇರಿದಂತೆ ಹಲವು ಕಾಮಿಡಿ ಕಾರ್ಯಕ್ರಮಗಳಲ್ಲಿ ಜಾಕಿ ಶ್ರಾಫ್ ಅವರ ನಕಲನ್ನು ಹಲವು ಹಾಸ್ಯ ಕಲಾವಿದರು ಮಾಡುತ್ತಾ ಬಂದಿದ್ದಾರೆ. ಆದರೆ ಇನ್ನು ಮುಂದೆ ಇದಕ್ಕೆ ಅವಕಾಶ ಇರುವುದಿಲ್ಲ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!