ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಬಹಳ ಕಡಿಮೆ. ಈಗ ಆ ಸಾಲಿಗೆ ಸಾನ್ವಿಕ ಸೇರ್ಪಡೆಯಾಗಿದ್ದಾರೆ. ಕೇರಳ ರಾಜ್ಯದವರಾದ ಸಾನ್ವಿಕ ತಮ್ಮ ಮೊದಲ ನಿರ್ದೇಶನದ ಚಿತ್ರವನ್ನು ಕನ್ನಡದಲ್ಲಿ ಮಾಡಿರುವುದು ವಿಶೇಷ. ನಿರ್ದೇಶನ ಮಾತ್ರ ಅಲ್ಲ. ನಿರ್ಮಾಪಕಿ, ನಾಯಕಿ, ಸಾಹಸ ನಿರ್ದೇಶಕಿ ಹೀಗೆ ಒಂಭತ್ತು ಆಯಾಮಾಗಳಲ್ಲಿ ಸಾನ್ವಿಕ ಕೆಲಸ ಮಾಡಿದ್ದಾರೆ. ಅಜಯ್ ವರ್ಧನ್ ಈ ಚಿತ್ರದ ನಾಯಕರಾಗಿ ನಟಿಸಿದ್ದು, ಇತ್ತೀಚೆಗ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ನೆರವೇರಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“ಜಾವ ಕಾಫಿ” ಚಿತ್ರ ನನ್ನ ಕನಸು ಹಾಗೂ ನನ್ನ ಮನಸ್ಸು ಎಂದು ಮಾತನಾಡಿದ ನಿರ್ದೇಶಕಿ, ನಾಯಕಿ, ನಿರ್ಮಾಪಕಿ ಸಾನ್ವಿಕ, ಚಿತ್ರ ನಿರ್ದೇಶನ ಮಾಡಬೇಕೆಂಬುದು ನನ್ನ ಹದಿನೈದು ವರ್ಷಗಳ ಕನಸು. ಈಗ ಅದು ನನಸಾಗಿದೆ. ನಾನು ಕೇರಳದವಳಾಗಿದರೂ ನನ್ನ ಮೊದಲ ಚಿತ್ರವನ್ನು ಕನ್ನಡದಲ್ಲಿ ಮಾಡಿದ್ದೇನೆ. ನಿರ್ದೇಶಕಿ, ನಿರ್ಮಾಪಕಿ, ನಾಯಕಿ, ಕಥೆ, ಚಿತ್ರಕಥೆ, ಸಾಹಸ ನಿರ್ದೇಶನ ಸೇರಿದಂತೆ ಈ ಚಿತ್ರದ ಒಂಭತ್ತು ಆಯಾಮಗಳಲ್ಲಿ ಕೆಲಸ ಮಾಡಿದ್ದೇನೆ. ಕನ್ನಡದಲ್ಲಿ ನಿರ್ದೇಶನ ಮಾಡಲು ನನಗೆ ಅಸೋಸಿಯೇಟ್ ಡೈರೆಕ್ಟರ್ ವಸಂತ್ ಸಹಾಯ ಮಾಡಿದರು. “ಜಾವ ಕಾಫಿ” ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಬೆಂಗಳೂರು, ಮಂಗಳೂರು, ಕೇರಳ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಚಿತ್ರದ ಮೊದಲ ಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಆನಂತರ ಬಿಡುಗಡೆ ದಿನಾಂಕ ತಿಳಿಸುತ್ತೇವೆ. ಮೊದಲು ಕನ್ನಡದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಆನಂತರ ಪ್ಯಾನ್ ಇಂಡಿಯಾ ಚಿತ್ರವಾಗಿ ಎಲ್ಲಾ ಭಾಷೆಗಳಲ್ಲೂ ರಿಲೀಸ್ ಮಾಡುತ್ತೇವೆ ಎಂದರು.
ಈಗಾಗಲೇ ತುಳು ಚಿತ್ರದಲ್ಲಿ ನಟಿಸಿರುವ ನನಗೆ ಇದು ಮೂರನೇ ಚಿತ್ರ. ಸಾನ್ವಿಕ ಅವರು ಒಂದೊಳ್ಳೆ ಚಿತ್ರ ಮಾಡಿದ್ದಾರೆ. ನಾನು ಪತ್ರಕರ್ತನ ಪಾತ್ರ ಮಾಡಿದ್ದೇನೆ ಎಂದು ನಾಯಕ ಶೈನಿಂಗ್ ಸ್ಟಾರ್ ಅಜಯ್ ವರ್ಧನ್ ತಿಳಿಸಿದರು.
ಚಿತ್ರದಲ್ಲಿ ನಟಿಸಿರುವ ಮಂಜುನಾಥ್, ಪ್ರತಿಮ, ಭವಾನಿ ಶಂಕರ್, ವಿಜಯ್ ಕುಮಾರ್, ರಾಮಚಂದ್ರ, ರಾಮಲಿಂಗಪ್ಪ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಹದಿನೆಂಟು ವಯಸ್ಸಿನ ಯುವಕ ಧ್ರುವ ದೇವರಾಯನ್, ನೃತ್ಯ ನಿರ್ದೇಶಕ ಪಾಲಾಶ್ ಮಾಸ್ಟರ್ ಸೇರಿದಂತೆ ಚಿತ್ರತಂಡದ ಸದಸ್ಯರು “ಜಾವ ಕಾಫಿ” ಚಿತ್ರದ ಬಗ್ಗೆ ಮಾತನಾಡಿದರು. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀಧರ್ ಕರ್ಕೇರ ಸಂಗೀತ ನೀಡಿದ್ದಾರೆ.

Be the first to comment