ಜಾಕ್ವೆಲಿನ್ ಸಿನಿ ಪ್ರಯಾಣಕ್ಕೆ ಕಂಟಕ

ಬಹುಕೋಟಿ ವಂಚಕನ ಜೊತೆಗಿನ ಸಖ್ಯ ಬಾಲಿವುಡ್ ಗ್ಲಾಮರ್ ಗೊಂಬೆ ಜಾಕ್ವೆಲಿನ್ ಫರ್ನಾಂಡಿಸ್ ಸಿನಿ ಬದುಕಿಗೆ ಕಂಟಕ ಆಗುತ್ತದೆಯೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.

ರಾಜಕಾರಣಿಯ ನೆಂಟ ಎಂದು ನೂರಾರು ಜನರಿಗೆ 200 ಕೋಟಿ ರೂ.ಗಳಷ್ಟು ವಂಚನೆ ಮಾಡಿದ ಆರೋಪದಡಿ ಸುಖೇಶ್ ಚಂದ್ರಶೇಖರ್ ಜೈಲು ಸೇರಿದ್ದು, ಈತನ ಜೊತೆ ಸಂಬಂಧ ಇಟ್ಟುಕೊಂಡಿರುವ ಜಾಕ್ವೆಲಿನ್ ಗೆ ಮುಳುವಾಗಿ ಪರಿಣಮಿಸಿದೆ.
ಜಾಕ್ವೆಲಿನ್ ಫರ್ನಾಂಡಿಸ್, ಆರೋಪಿ ಸುಖೇಶ್ ನಿಂದ 10 ಕೋಟಿ ರೂಪಾಯಿ ಮೌಲ್ಯದ ಉಡುಗೊರೆ ಸೇರಿದಂತೆ 52 ಲಕ್ಷ ಮೌಲ್ಯದ ಕುದುರೆ, 9 ಲಕ್ಷ ಮೌಲ್ಯದ ಪರ್ಷಿಯನ್ ದೇಶದ ಬೆಕ್ಕನ್ನು ಗಿಫ್ಟ್ ಆಗಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಸುಖೇಶ್ ಜೊತೆಯಿರುವ ಸಂಬಂಧ ಜಾಕ್ವಲಿನ್ ಗೆ ಕಂಟಕವಾಗಿದ್ದು, ವೃತ್ತಿ ಬದುಕಿನ ಮೇಲೂ ಕರಿಛಾಯೆ ಬೀರಿದೆ.

ನೀಳಕಾಯದ ಸುಂದರಿ ಆಗಿರುವ ಜಾಕ್ವೆಲಿನ್ ಫರ್ನಾಂಡಿಸ್ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಶ್ರೀಲಂಕಾದ ಟಾಪ್ ಹೀರೋಯಿನ್.ಕನ್ನಡದ ವಿಕ್ರಾಂತ್ ರೋಣ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ನಂ.1 ಐಟಂ ಡ್ಯಾನ್ಸರ್ ಆದ ಜಾಕ್ವೆಲಿನ್ ಸೂಪರ್ ಸ್ಟಾರ್ ಗಳ ಜೊತೆ ಸೊಂಟ ಬಳಕಿಸಿ ಐಟಂ ಸಾಂಗ್ ಗೆ ಸೈ ಎನ್ನಿಸಿಕೊಂಡಿದ್ದಾರೆ. ವಿಕ್ರಾಂತ್ ರೋಣದಲ್ಲಿ ಕಿಚ್ಚನ ಜೊತೆ ಕುಣಿದಿದ್ದಾರೆ. ಜಾಕ್ವೆಲಿನ್ ತನ್ನ ನಟನೆಗಿಂತ ಹೆಚ್ಚಾಗಿ ಸೌಂದರ್ಯದಿಂದಲೇ ಹೆಸರು ಮಾಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುಂಚೆ ಇವರು ಮಾಡೆಲಿಂಗ್ ಸಾಕಷ್ಟು ಹೆಸರು ಮಾಡಿದ್ದರು.

ಸುಖೇಶ್ ಚಂದ್ರಶೇಖರ್ ಜೊತೆಗಿನ ನಂಟಿನ ಹಿನ್ನೆಲೆಯಲ್ಲಿ ಈ ಹಿಂದೆಯೇ ಜಾಕ್ವಲಿನ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಬಳಿಕ ಜಾಕ್ವಲಿನ್ ವಿಚಾರಣೆಗೆ ಸಹ ಹಾಜರಾಗಿದ್ದರು. ಇತ್ತೀಚೆಗೆ ಇವರಿಬ್ಬರ ಫೋಟೋ ರಿವೀಲ್ ಆದ ಮೇಲೆ, ಜಾಕ್ವಲಿನ್ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಜಾಕ್ವೆಲಿನ್ ಕಾರ್ಯಕ್ರಮವೊಂದಕ್ಕೆ ದುಬೈಗೆ ತೆರಳುವ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದು, ಜಾಕ್ವೆಲಿನ್ ಗೆ ಜಾರಿ ನಿರ್ದೇಶನಾಲಯ ಡಿ. 8 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

ಚಿತ್ರ ಲೋಕದಲ್ಲಿ ವಿಭಿನ್ನ ನಟನೆಯಿಂದ ಉತ್ತುಂಗಕ್ಕೇರುವ ಹೊತ್ತಿಗೆ ವಂಚಕನ ಸ್ನೇಹದಿಂದ ಜಾಕ್ವಲಿನ್ ಸಂಕಷ್ಟವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ಸಮಸ್ಯೆಯಿಂದ ಜಾಕ್ವೆಲಿನ್ ಹೇಗೆ ಹೊರಬರುತ್ತಾರೆ ಎನ್ನುವುದರ ಮೇಲೆ ಅವರ ಸಿನಿ ಪಯಣ ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!