ದಳಪತಿ ವಿಜಯ್ ಸಿನಿಮಾ ‘ಜನನಾಯಗನ್’ ನ್ನು ಜನವರಿ 21ರವರೆಗೆ ಬಿಡುಗಡೆ ಮಾಡದಂತೆ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಹಿಂದೆ ‘ಜನನಾಯಗನ್’ ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡುವಂತೆ ಮದ್ರಾಸ್ ಹೈಕೋರ್ಟ್, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ)ಗೆ ಸೂಚಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸಿಬಿಎಫ್‌ಸಿ ಮೇಲ್ಮನವಿ ಸಲ್ಲಿಸಿ ಚಿತ್ರವನ್ನು ಪರಿಷ್ಕರಣಾ ಸಮಿತಿಯಿಂದ ಪರಿಶೀಲನೆ ನಡೆಸಬೇಕೆಂದು ಮಂಡಳಿ ಮನವಿ ಮಾಡಿತ್ತು. ಚಿತ್ರದಲ್ಲಿ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಲಾಂಛನಗಳ ಬಳಕೆ ಇದ್ದು ಅದನ್ನು ತಜ್ಞರು ಪರಿಶೀಲಿಸಬೇಕಿದೆ ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ವಾದ ಮಂಡಿಸಿತ್ತು.
ಹೊಸ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಜನವರಿ 21ರವರೆಗೆ ‘ಜನನಾಯಗನ್’ ಸಿನಿಮಾ ಬಿಡುಗಡೆಗೆ ತಡೆ ನೀಡಿದೆ. ಪೊಂಗಲ್ ಹಬ್ಬಕ್ಕೆ ಒಂದು ವಾರದ ಮುನ್ನ ಜನವರಿ 9ರಂದು ವಿಶ್ವದಾದ್ಯಂತ ‘ಜನನಾಯಗನ್’ ಸಿನಿಮಾ ಬಿಡುಗಡೆ ಆಗಬೇಕಿತ್ತು.
‘ಜನನಾಯಗನ್’ ಚಿತ್ರ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ತಮಿಳು ಚಿತ್ರಗಳಿಗೆ ಹೆಸರಾಗಿರುವ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ವಿಜಯ್ ಕಟೌಟ್‌ಗಳು ರಾರಾಜಿಸುತ್ತಿದ್ದವು. ಆದರೆ ಸೆನ್ಸಾರ್ ಮಂಡಳಿಯ ನಿರ್ಧಾರದಿಂದ ಚಿತ್ರ ಬಿಡುಗಡೆಗೆ ತಣ್ಣೀರು ಎರಚಿದಂತಾಗಿದೆ.
‘ಜನ ನಾಯಗನ್’ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರೀಮೇಕ್ ಆಗಿದೆ. ಸಿನಿಮಾವನ್ನು ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಸಾಕು ಪುತ್ರಿಯಾಗಿ ಮಲಯಾಳಂ ನಟಿ ಮಮಿತಾ ಬಿಜು, ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಪಾಕಿಸ್ತಾನ ಹಾಗೂ ಪಾಕ್ ಸೈನ್ಯದ ವಿರುದ್ಧದ ಸಂಭಾಷಣೆಗಳು ಮತ್ತು ದೃಶ್ಯಗಳು ಕಾಣಿಸಿಕೊಂಡಿವೆ. ಈ ಅಂಶಗಳನ್ನು ಆಕ್ಷೇಪಿಸಿ ಸಿನಿಮಾಗೆ ಸೌದಿ ಅರೆಬಿಯಾದಲ್ಲಿ ನಿಷೇಧ ಹೇರಲಾಗಿದೆ.





Be the first to comment