ಏಪ್ರಿಲ್ 14ರಂದು ಅಪ್ಪು ಅಭಿನಯದ ಕೊನೆಯ ಕಮರ್ಷಿಯಲ್ ಸಿನಿಮಾ ‘ಜೇಮ್ಸ್’ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.
ಇದೇ ದಿನ ಪಾನ್ ಇಂಡಿಯನ್ ಸಿನಿಮಾ ‘ಕೆಜಿಎಫ್ 2’ ಬಿಡುಗಡೆಯಾಗುತ್ತಿದೆ. ವಿಶ್ವದಾದ್ಯಂತ ಇರುವ ಸಿನಿಪ್ರಿಯರು ಈ ಎರಡೂ ಸಿನಿಮಾಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಸಿಕ್ಕಿದೆ. ಅಪ್ಪು ಅಭಿಮಾನಿಗಳಿಗೆ ಮತ್ತೊಮ್ಮೆ ‘ಜೇಮ್ಸ್’ ನೋಡುವ ಚಾನ್ಸ್ ಸಿಗಲಿದೆ.
ಜೇಮ್ಸ್’ ಸಿನಿಮಾ ಐದೂ ಭಾಷೆಗಳಲ್ಲೂ ಏಕಕಾಲಕ್ಕೆ ಒಟಿಟಿಯಲ್ಲಿ ಬಿಡುಗಡೆ ಕಾಣಲಿದೆ. ಸೋನಿ ಲೈವ್ ಒಟಿಟಿ ವೇದಿಕೆ ಮೊದಲ ಬಾರಿಗೆ ಕನ್ನಡದ ಸಿನಿಮಾ ಬಿಡುಗಡೆ ಮಾಡುತ್ತಿದೆ.
ಈ ವಿಷಯವನ್ನು ಸೋನಿ ಲೈವ್ ಸಂಸ್ಥೆ ಟ್ವಿಟರ್‌ನಲ್ಲಿ ಅನೌನ್ಸ್ ಮಾಡಿದೆ. ‘ಕರ್ನಾಟಕದ ರಾಜರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಪವರ್ ಪ್ಯಾಕ್ಡ್ ಆಕ್ಷನ್ ಎಂಟರ್ಟೈನರ್ ‘ಜೇಮ್ಸ್’ ಅತೀ ಶೀಘ್ರದಲ್ಲಿ SonyLIV ನಲ್ಲಿ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಪ್ರಿಲ್ 14ಕ್ಕೆ ಎಕ್ಸ್‌ಕ್ಲೂಸಿವ್ ಆಗಿ ಸೋನಿ ಲೈವ್‌ನಲ್ಲಿ’ ಎಂದು ಟ್ವೀಟ್ ಮಾಡಲಾಗಿದೆ.
‘ಕೆಜಿಎಫ್ 2’ ಸಿನಿಮಾ ವlದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ‘ಜೇಮ್ಸ್’ ಸಿನಿಮಾ ಬಿಡುಗಡೆ ಮಾಡುತ್ತಿರುವುದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ. ಏಪ್ರಿಲ್ 14ರ ಬಳಿಕ ಜನರಿಗೆ ರಜೆಗಳಿರುವುದರಿಂದ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳನ್ನು ಜನ ನೋಡುತ್ತಾರೆ ಎನ್ನುವ ಲೆಕ್ಕಾಚಾರ ಸೋನಿ ಲೈವ್ ದ್ದು ಆಗಿದೆ.
‘ಜೇಮ್ಸ್’ ಮಾರ್ಚ್ 17ರಂದು ಬಿಡುಗಡೆಯಾಗಿದ್ದು ಮೊದಲ ದಿನ ಸುಮಾರು 4 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ವಿತರಕರ ಪ್ರಕಾರ, ‘ಜೇಮ್ಸ್’ ಇಲ್ಲಿವರೆಗೇ 120 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡದವರು ಜೇಮ್ಸ್ ನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.
ಜೇಮ್ಸ್’ನಲ್ಲಿ ನಾಯಕಿಯಾಗಿ ತಮಿಳು ನಟಿ ಪ್ರಿಯಾ ಆನಂದ್ ನಟಿಸಿದ್ದಾರೆ. ‘ರಾಜಕುಮಾರ’ ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ ಹಿರಿಯ ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿ ನಿರ್ದೇಶಿಸಿದ್ದಾರೆ. ಕಿಶೋರ್ ಪತಿಕೊಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಶ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ, ದೀಪು ಎಸ್.ಕುಮಾರ್ ಸಂಕಲನ ಇದೆ.
ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣ ನಟಿಸಿದೆ.
__
Be the first to comment