ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುವುದು ಅನುಮಾನ ಆಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಶೇ.50ರ ಸೀಟು ಸಾಮರ್ಥ್ಯದ ಪ್ರದರ್ಶನ ಜಾರಿಯಲ್ಲಿದೆ. ಜೇಮ್ಸ್ ಚಿತ್ರದ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯಬೇಕಿದೆ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಮಾರ್ಚ್ 17 ಆಗಿದ್ದು, ಅಂದು ಚಿತ್ರ ಬಿಡುಗಡೆಯಾಗಬಹುದು ಎಂದು ನಿರೀಕ್ಷೆ ಹೊಂದಲಾಗಿತ್ತು. ಈ ವೇಳೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದರೂ, ಸದ್ಯ ಕೊರೋನಾ ಕಾಟದಿಂದ ಥಿಯೇಟರ್ ಮೇಲೆ ನಿರ್ಬಂಧವಿದೆ. ಈ ಕಾರಣದಿಂದ ಮಾರ್ಚ್ 17 ಕ್ಕೆ ಚಿತ್ರ ರಿಲೀಸ್ ಆಗುವುದು ಅನುಮಾನ ಆಗಿದೆ. ಕೊರೋನಾ ಸಂಕಷ್ಟ ಮುಗಿದ ಮೇಲೆಯೇ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಶೂಟಿಂಗ್ ಬಹುತೇಕ ಪೂರ್ಣ ಆಗಿತ್ತು. ಈಗ ಅವರ ಪಾತ್ರಕ್ಕೆ ಡಬ್ಬಿಂಗ್ ಯಾರು ಮಾಡುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಒಂದು ಕಡೆ ಶಿವಣ್ಣ ಧ್ವನಿ ನೀಡಬೇಕು ಎನ್ನುವ ಅಭಿಪ್ರಾಯ ಇದೆ. ಈ ಬಗ್ಗೆ ಚಿತ್ರತಂಡ ಇನ್ನು ಯಾವುದೇ ಮಾಹಿತಿ ನೀಡಿಲ್ಲ.
ಈ ಹಿಂದೆ ‘ಜೇಮ್ಸ್’ ಸಿನಿಮಾದ ಪೋಸ್ಟರ್ ಸ್ವಾತಂತ್ರ್ಯೋತ್ಸವದ ದಿನ ಬಿಡುಗಡೆ ಆಗಿತ್ತು. ಪೋಸ್ಟರ್ ನಲ್ಲಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಪಡೆಯ ಜೊತೆ ಪುನೀತ್ ಕಾಣಿಸಿಕೊಂಡಿದ್ದರು.
ರಾಜಕುಮಾರ ಸಿನಿಮಾದಲ್ಲಿ ನಾಯಕಿಯಾಗಿದ್ದ ಪ್ರಿಯಾ ಆನಂದ್ ‘ಜೇಮ್ಸ್’ ಚಿತ್ರದ ಹೀರೋಯಿನ್ ಆಗಿ ನಟಿಸಿದ್ದಾರೆ. ತಮಿಳು ನಟ ಶರತ್ ಕುಮಾರ್ ವಿಲನ್ ಪಾತ್ರ ಮಾಡಿದ್ದಾರೆ. ಅವಿನಾಶ್, ಚಿಕ್ಕಣ್ಣ, ಹರ್ಷ, ರಂಗಾಯಣ ರಘು, ಶೈನ್ ಶೆಟ್ಟಿ, ಕಾವ್ಯ ಶಾಸ್ತ್ರಿ, ನಯನಾ, ಅನು ಪ್ರಭಾಕರ್, ಶ್ರೀಕಾಂತ್, ಆದಿತ್ಯ ಮೆನನ್ ತಾರಾ ಬಳಗದಲ್ಲಿ ಇದ್ದಾರೆ.
ಅಪ್ಪು ಅಭಿಮಾನಿಗಳು ಪುನೀತ್ ಅವರ ಕೊನೆಯ ಚಿತ್ರವನ್ನು ತೆರೆಯ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
__
Be the first to comment