ಜಲಪಾತ ಟ್ರೇಲರ್ ಬಿಡುಗಡೆ; ರಮೇಶ್ ಬೇಗಾರ್ ನಿರ್ದೇಶನದ ಮಲೆನಾಡ ಕಥೆ

  • ಪರಿಸರದ ಕುರಿತು ಜಾಗೃತಿ ಮೂಡಿಸುವ ಈ ಚಿತ್ರ ಅಕ್ಟೋಬರ್ 6ರಂದು ತೆರೆಗೆ* .

ಮಲೆನಾಡ ಸುಂದರ ಪರಿಸರದ ಹಾಗೂ ಅಲ್ಲಿನ ಸಮಸ್ಯೆಗಳನ್ನು ಪರಿಚಯಿಸುವ “ಜಲಪಾತ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಖ್ಯಾತ ಲೇಖಕ ಹಾಗೂ ಪತ್ರಕರ್ತ ಜೋಗಿ, ನಟ ಪೃಥ್ವಿ ಶಾಮನೂರು “ಜಲಪಾತ” ಚಿತ್ರದ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಾನು ಬಹುಕೋಟಿ ಸಿನಿಮಾಗಳ ಕುರಿತು ಮಾತಾಡಲಾರೆ. ನನಗೆ ಸಣ್ಣ ಸಿನಿಮಾ ಮಾಡುವವರೆಂದರೆ ಅಕ್ಕರೆ. ಯಾಕೋ ನಿಜವಾದ ಸಿನಿಮಾ ಪ್ರೀತಿ ಕಂಟೆಂಟ್ ಸಿನಿಮಾ ಮಾಡುವವರಲ್ಲಿ ಹೆಚ್ಚು ಆಪ್ತವಾಗಿರುತ್ತದೆ. ಅಂತಹ ಪರಿಸರದ ಕುರಿತು ಜಾಗೃತಿ ಮೂಡಿಸುವ “ಜಲಪಾತ” ಚಿತ್ರವನ್ನು ರಮೇಶ್ ಬೇಗಾರ್ ನಿರ್ದೇಶಿಸಿದ್ದಾರೆ. ರವೀಂದ್ರ ತುಂಬರಮನೆ ನಿರ್ಮಿಸಿದ್ದಾರೆ. ಇಂತಹ ಒಳ್ಳೆಯ ಕಂಟೆಂಟ್ ಇರುವ ಸಾಕಷ್ಟು ಚಿತ್ರಗಳು ಇವರಿಂದ ಇನ್ನಷ್ಟು ಬರಲಿ ಎಂದು ಪ್ರಖ್ಯಾತ ಸಾಹಿತಿ – ಪತ್ರಕರ್ತ ಜೋಗಿ ತಿಳಿಸಿದರು.

ನಮ್ಮ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಟ್ರೇಲರ್ ಗೆ ಜನಮೆಚ್ಚುಗೆ ಬರುತ್ತಿದೆ. ಚಿತ್ರ ಅಕ್ಟೋಬರ್ 6 ರಂದು ತೆರೆಗೆ ಬರಲಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಜೋಗಿ ಹಾಗೂ ಪೃಥ್ವಿ ಶಾಮನೂರು ಅವರಿಗೆ ಧನ್ಯವಾದ ಎಂದರು ನಿರ್ದೇಶಕ ರಮೇಶ್ ಬೇಗಾರ್.

ನಾನು ಪರಿಸರ ತಜ್ಞ ಎಲ್ಲಪ್ಪ ರೆಡ್ಡಿ ಅವರ ಶಿಷ್ಯ. ಪರಿಸರದ ಬಗ್ಗೆ ಕಾಳಜಿ ಹೆಚ್ಚು. ರಮೇಶ್ ಬೇಗಾರ್ ಅವರ ಕಥೆ ಇಷ್ಟವಾಗಿ ಈ ಸಿನಿಮಾ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕ ಟಿ.ಸಿ.ರವೀಂದ್ರ ತುಂಬರಮನೆ ತಿಳಿಸಿದರು.

“ಪದವಿ ಪೂರ್ವ” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಾನು ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ ಎಂದು ಮಾತನಾಡಿದ ನಾಯಕ ರಜನೀಶ್, ತಮ್ಮ ಪಾತ್ರದ ಬಗ್ಗೆ ಹಾಗೂ ಚಿತ್ರದ ಕುರಿತು ಮಾತನಾಡಿದರು.

ಮಲೆನಾಡನ್ನು ಕೇವಲ ಪ್ರವಾಸಿತಾಣನಾಗಷ್ಟೇ ನೋಡುತ್ತಿದ್ದೇವೆ. ಆದರೆ ಅಲ್ಲಿನ ಸಂಸ್ಕೃತಿಯ ಪರಿಚಯದ ಜೊತೆಗೆ ಸಮಸ್ಯೆಗಳನ್ನು ತೋರಿಸುವ ಪ್ರಯತ್ನ ಈ ಚಿತ್ರದಲ್ಲಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎನ್ನುತ್ತಾರೆ ನಾಗಶ್ರೀ ಬೇಗಾರ್‌.

ನಿರ್ದೇಶಕ ರಮೇಶ್ ಬೇಗಾರ್ ಅವರ ಕಾರ್ಯವೈಖರಿ ನನಗೆ ಇಷ್ಟ. ಹಾಗಾಗಿ ಅವರ ಎರಡನೇ ಚಿತ್ರದಲ್ಲೂ ನಟಿಸಿದ್ದೇನೆ ಎಂದರು ನಟ ಪ್ರಮೋದ್ ಶೆಟ್ಟಿ.

ಚಿತ್ರದಲ್ಲ ನಟಿಸಿರುವ ಎಂ.ಆರ್ ಸುರೇಶ್, ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ, ಗಾಯಕಿ ಪದ್ಮಿನಿ ಓಕ್ ಹಾಗೂ ಛಾಯಾಗ್ರಾಹಕ ಶಶೀರ್ “ಜಲಪಾತ” ಚಿತ್ರದ ಬಗ್ಗೆ ಮಾತನಾಡಿದರು. ಸಿನಿಮಾ ತಂಡದ ಅಭಿಷೇಕ್ ಹೆಬ್ಬಾರ್ , ಕಾರ್ತಿಕ್ , ಚಿದಾನಂದ ಹೆಗ್ಗಾರ್ , ರಶ್ಮಿ ಮೊದಲಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!