ಸಿನಿಮಾ ಮತ್ತು ಕಿರುತೆರೆ ನಟಿ ಪದ್ಮಜಾ ರಾವ್ ಅವರಿಗೆ 8ನೇ ಜೆಎಂಎಫ್‌ಸಿ ನ್ಯಾಯಾಲಯ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 40.20 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ಮೂಲಕ ಸ್ಯಾಂಡಲ್‌ವುಡ್‌ನಿಂದ ಜೈಲು ಪ್ರವೇಶಿಸಿದ ನಟಿ, ನಟರ ಸಾಲಿಗೆ ಹಿರಿಯ ನಟಿ ಪದ್ಮಜಾ ರಾವ್ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ. ವೀರು ಟಾಕೀಸ್ ಸಂಸ್ಥೆಯ ಮಾಲೀಕರಾದ ಮಂಗಳೂರಿನ ವೀರೇಂದ್ರ ಶೆಟ್ಟಿ, ಪದ್ಮಜಾ ರಾವ್ ವಿರುದ್ಧ ದೂರು ನೀಡಿದ್ದರು. ಪದ್ಮಜಾ ರಾವ್ ಅವರು 40 ಲಕ್ಷ ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸಾಲ ವಾಪಸ್ ನೀಡಬೇಕಿದ್ದ ಸಮಯದಲ್ಲಿ ಚೆಕ್ ಅನ್ನು ಬ್ಯಾಂಕ್‌ಗೆ ಹಾಕಿದಾಗ ಖಾತೆಯಲ್ಲಿ ಅಷ್ಟೊಂದು ಹಣವಿರಲಿಲ್ಲ. ನಾನು ಸಾಲ ಪಡೆದಿಲ್ಲ, ಯಾವುದೇ ಚೆಕ್ ನೀಡಿಲ್ಲ ಎಂದು ನಟಿ ಪದ್ಮಜಾ ರಾವ್ ಹೇಳಿಕೆ ನೀಡಿದ್ದರು. ಪದ್ಮಜಾ ರಾವ್ 52.70 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ವೀರೇಂದ್ರ ಶೆಟ್ಟಿ ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
“ನಮ್ಮ ಮನೆಯಿಂದ ಚೆಕ್ ಕಳವು ಮಾಡಿ, ಪೋರ್ಜರಿ ಸಹಿ ಮಾಡಲಾಗಿದೆ” ಎಂದು ನಟಿಯ ಪರ ವಕೀಲರು ಕೋರ್ಟ್‌ನಲ್ಲಿ ವಾದಿಸಿದ್ದರು. ಆದರೆ ಇದಕ್ಕೆ ಸಂಬಂಧಪಟ್ಟಂತೆ ಪೂರಕ ದಾಖಲೆ ನೀಡಲು ವಿಫಲರಾಗಿದ್ದರು. ಈ ಕುರಿತು ಎಂಟನೇ ಜೆಎಂಎಫ್‌ಸಿ ನ್ಯಾಯಾಲಯವು ತೀರ್ಪು ನೀಡಿದ್ದು, ಪದ್ಮಜಾ ರಾವ್ ಅವರು 40.20 ಲಕ್ಷ ರೂಪಾಯಿ ದಂಡ ಪಾವತಿಸಬೇಕು. ದೂರುದಾರರಿಗೆ 40.17 ಲಕ್ಷ ರೂಪಾಯಿ ಮತ್ತು ಸರಕಾರಕ್ಕೆ 3 ಸಾವಿರ ರೂಪಾಯಿ ನೀಡಬೇಕು ಎಂದು ತೀರ್ಪು ನೀಡಿದೆ. ಜತೆಗೆ 3 ತಿಂಗಳ ಸಾದಾ ಜೈಲು ಶಿಕ್ಷೆಯನ್ನೂ ವಿಧಿಸಿದೆ.
ಪದ್ಮಜಾ ರಾವ್ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂಗಾರು ಮಳೆ, ಕ್ವಾಟ್ಲೆ ಸತೀಶ, ದಕ್ಷ, ಮಾದೇಶ, ನಮ್ಮ ದುನಿಯಾ ನಮ್ ಸ್ಟೈಲ್, ಪೆಟ್ರೋಮ್ಯಾಕ್ಸ್, ಬಾಡಿ ಗಾರ್ಡ್, ಬಹುದ್ಧೂರ್, ಬಚ್ಚನ್, ವರದನಾಯಕ, ಅಧ್ಯಕ್ಷ ಇನ್ ಅಮೆರಿಕ, ಟಾಮ್ ಆಂಡ್ ಜೆರಿ, ಪಾರಿಜಾತ, ಬ್ರಹ್ಮಚಾರಿ, ರುಸ್ತುಂ, ಆರೇಂಜ್, ಕೃಷ್ಣ ತುಳಸಿ, ಆಟ, ಶಿವ, ಪಂಚಾಮೃತ, ಹಠವಾದಿ, ಬ್ರಹ್ಮ, ಗಾಳಿಪಟ, ರಾಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬೆಂಕಿಯಲ್ಲಿ ಅರಳಿದ ಹೂವು, ಸಮ ರೇಖೆಗಳು, ಶಿಖರ, ಅರಮನೆ ಗಿಳಿ, ಜೊತೆಜೊತೆಯಲಿ, ಹೂವಿ, ಭಾಗ್ಯಲಕ್ಷ್ಮಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.
Be the first to comment