ಹುಲಿ ಉಗುರು ಮಾದರಿ ಪೆಂಡೆಂಟ್ ಪ್ರಕರಣ ವಿಚಾರವಾಗಿ ಅರಣ್ಯಾಧಿಕಾರಿಗಳ ದಾಳಿ ಕಾನೂನುಬಾಹಿರ ಎಂದು ದೂರಿರುವ ನಟ ಜಗ್ಗೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನೋಟಿಸ್ಗೆ ಉತ್ತರಿಸುವ ಮೊದಲೇ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಅರಣ್ಯಾಧಿಕಾರಿಗಳ ಕ್ರಮ ಕಾನೂನು ಬಾಹಿರ. ಈ ನೋಟಿಸ್ ನ್ನು ರದ್ದುಗೊಳಿಸುವಂತೆ ಕೋರಿ ಜಗ್ಗೇಶ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಹುಲಿ ಉಗುರಿನ ಮಾದರಿ ಪೆಂಡೆಂಟ್ ಧರಿಸಿದ ಕೆಲವರ ಫೋಟೋಗಳು ವೈರಲ್ ಆದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ನಟರಾದ ಜಗ್ಗೇಶ್, ದರ್ಶನ್ ತೂಗುದೀಪ ಸೇರಿದಂತೆ ನಾಲ್ವರಿಗೆ ನೋಟಿಸ್ ನೀಡಿ, ಬುಧವಾರ ಅವರ ಮನೆಗಳನ್ನು ಶೋಧಿಸಿದ್ದರು.
ಜಗ್ಗೇಶ್ ಈ ಹಿಂದೆ ತಾವು ಧರಿಸುವ ಲಾಕೆಟ್ ತಾಯಿ ಕೊಟ್ಟಿರುವ ಕಾಣಿಕೆ. ಅದನ್ನು ಅಧಿಕಾರಿಗಳಿಗೆ ಒಪ್ಪಿಸಿರುವುದಾಗಿ ಎಕ್ಸ್ನಲ್ಲಿ ಬರೆದುಕೊಂಡಿದ್ದರು.
“ಕಾನೂನು ದೊಡ್ಡದು. ಅಧಿಕಾರಿಗಳು ಕೇಳಿದ ವಸ್ತುವನ್ನು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು, ಸಮಾಜ ಘಾತಕರಿಗಿಂತ ನನ್ನ ತಾಯಿ ನೀಡಿದ ಕಾಣಿಕೆ ಬಗ್ಗೆ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದಗಳು. ತಲೆತಗ್ಗಿಸುವ ಯಾವುದೇ ಕೆಲಸ ಮಾಡಿಲ್ಲ, ಮಾಡೋದೂ ಇಲ್ಲ” ಎಂದು ಜಗ್ಗೇಶ್ ಪೋಸ್ಟ್ ಮಾಡಿದ್ದರು.
“ಒಂದು ವಿಷಯ ಅದ್ಭುತವಾಗಿ ಅರಿತೇ ಪ್ರೀತಿಸುವವರು 1,000 ಜನ ಇದ್ದರೆ, ವಿಷಯವಿಲ್ಲದೆ ದ್ವೇಷ ಮಾಡುವ 100 ಜನರೂ ಇದ್ದೇ ಇರುತ್ತಾರೆ. ಒಳ್ಳೆಯ ಗುಣ ನಡತೆ ಇದ್ದಾಗ ಕೊಲ್ಲೋಕೆ ಸಾವಿರ ಮಂದಿ ಬಂದರು ಕಾಯಲು ದೇವರು ಒಬ್ಬ ಬರುತ್ತಾನೆ. ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆಯದನ್ನು ಮಾಡಿ. ಅನ್ಯರಿಗೆ ಕೆಡುಕು ಬಯಸಿ ಬಾಳಿದರೆ ನಾಶವಾಗುತ್ತಾರೆ” ಎಂದು ಹೇಳಿದ್ದರು.
ಹುಲಿ ಉಗುರು ಮಾದರಿ ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಬಿಗ್ಬಾಸ್ ಸ್ಫರ್ಧಿ ವರ್ತೂರು ಸಂತೋಷ್ ಬಂಧನವಾಗಿದೆ. ಹುಲಿ ಉಗುರು ಧರಿಸಿದ ಆರೋಪದಡಿ ಜಗ್ಗೇಶ್, ತೂಗುದೀಪ್ ದರ್ಶನ್, ಬಿದನಗೆರೆಯ ಶನೇಶ್ವರ ದೇವಾಲಯದ ಅರ್ಚಕ ಧನಂಜಯ ಗುರೂಜಿ ಸೇರಿದಂತೆ ಹಲವರ ವಿರುದ್ಧ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ.
Be the first to comment