ಎಸ್ ರೋಹಿತ್‍ನ ಜಗವೇ ಒಂದು ಚಿತ್ರರಂಗ!
ವಿ.ಸೋಮಶೇಖರ್ ನಿರ್ದೇಶನ, ಹಂಸಲೇಖಾ ಸಾಹಿತ್ಯ-ಸಂಗೀತ, ಶಿವರಾಜ್‍ಕುಮಾರ್ ಅಭಿನಯದ ‘ರಣರಂಗ’ ಆ ಕಾಲಕ್ಕೆ ಯಶಸ್ವಿ ಚಿತ್ರ ಅನಿಸಿಕೊಂಡು ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಅದರಲ್ಲೂ ‘ಜಗವೇ ಒಂದು ರಣರಂಗ’ ಗೀತೆಯನ್ನು ನೋಡುತ್ತಿದ್ದರೆ ಹದಿಹರೆಯದ ಹುಡುಗರಿಗೆ ಮೈ ರೋಮಾಂಚನಗೊಳ್ಳುತ್ತಿತ್ತು. ಅಂದು ಈ ಹಾಡನ್ನು ನೋಡುವ ಸಲುವಾಗಿ ಬೆಂಗಳೂರಿನ ಹುಡುಗ ಎಸ್.ರೋಹಿತ್ ಟಿವಿ ಮುಂದೆ ಕಾಯುತ್ತಾ ಕುಳಿತಿದ್ದರು. ಇದನ್ನು ಪದೇ ಪದೇ ನೋಡುತ್ತಾ ಶಿವಣ್ಣನ ಕಟ್ಟಾ ಅಭಿಮಾನಿಯಾಗಿ ಚಿತ್ರರಂಗಕ್ಕೆ ಬರಬೇಕೆಂಬ ಸಣ್ಣದೊಂದು ಜಿಗುಟು ಚಿಗುರೊಡದಿದೆ. ಸರ್ಕಾರಿ ನೌಕರರಾಗಿದ್ದ ಅಪ್ಪ ಶಾಂತಪ್ಪ ತೀರಿಕೊಂಡಿದ್ದರಿಂದ ಮನೆಕಡೆಯಿಂದ ಅಷ್ಟಾಗಿ ಅನುಮತಿ ಸಿಕ್ಕಿಲ್ಲ. ಹಾಗೂ ಹೀಗೂ ಪಿ.ಯು.ಸಿ ತನಕ ವ್ಯಾಸಾಂಗ ಮಾಡಿ ಓದಿಗೆ ತಿಲಾಂಜಲಿ ಇಟ್ಟಿದ್ದಾರೆ. ಮುಂದೆ ಗೀತೆಯ ಸ್ಪೂರ್ತಿಯಿಂದ ಈ ರಂಗದಿಂದಲೇ ಜೀವನ ರೂಪಿಸಿಕೊಳ್ಳಬೇಕೆಂದು ನಿರ್ಧರಿಸಿ ಆದರ್ಶ ಫಿಲಿಂ ಇನ್ಸಿಟ್ಯೂಟ್‍ನಲ್ಲ್ಲಿ ಒಂದು ವರ್ಷದ ಡಿಎಫ್‍ಎ ಕೋರ್ಸ್ ಮುಗಿಸಿದ್ದಾರೆ. ಹಿರಿಯ ನಿರ್ದೇಶಕ ಭಗವಾನ್ ಸಾರಥ್ಯದ ಬ್ಯಾಚ್‍ನಲ್ಲಿ ಮೇಘನಾಗಾಂವ್ಕರ್, ರವಿತೇಜಾ, ಅಶೋಕ್, ನವೀನ್‍ಸೋಮಣ್ಣ ಸಹಪಾಠಿಗಳು. ಒಮ್ಮೆ ಡ್ಯಾನ್ಸ್ ಕಾಂಪಿಟೇಶನ್‍ಗೆ ಹೋಗಿದ್ದಾರೆ. ಅಲ್ಲಿ ಒಂದಷ್ಟು ಸಂಪರ್ಕ ಸಿಕ್ಕಿದ ಕಾರಣ ಕಾಂಚನಗಂಗಾ ಚಿತ್ರದಲ್ಲಿ ಸಣ್ಣ ಪಾತ್ರಕ್ಕೆ ಮೊದಲ ಬಾರಿ ಬಣ್ಣ ಹಚ್ಚಿದ್ದಾರೆ. ಇದರ ನಡುವೆ ಸಿಲ್ಲಿಲಲ್ಲಿ, ಪಾಪಪಾಂಡು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದು ಉಂಟು.
ನಂತರ ಪ್ರಕಾಶ್ ನಿರ್ದೇಶನದ ‘ರಿಷಿ’ಯಲ್ಲಿ ವಿಜಯರಾಘವೇಂದ್ರ ಗೆಳಯನಾಗಿ, ಒಂದು ವರ್ಷ ಪ್ರದರ್ಶನ ಕಂಡ ‘ಮಿಲನ’ದಲ್ಲಿ ಪುನೀತ್‍ರಾಜ್‍ಕುಮಾರ್ ಗೆಳೆಯರಲ್ಲಿ ಒಬ್ಬರಾಗಿ ನಟಿಸಿದ್ದಾರೆ. ಅನೀಶ್‍ತೇಜಶ್ವರ್ ನಾಯಕತ್ವದ ‘ನಮ್ ಏರಿಯಾದಲ್ಲಿ ಒಂದು ದಿನ’ ಸಿನಿಮಾವನ್ನು ತುಮಕೂರು ಪ್ರಾಂತ್ಯಕ್ಕೆ ವಿತರಣೆ ತೆಗೆದುಕೊಂಡು ಅಲ್ಲೂ ಒಂದು ಕೈ ನೋಡಿದ್ದಾರೆ. ಆ ಚಿತ್ರದ ನಿರ್ದೇಶಕ ಅರವಿಂದ್‍ಕೌಶಿಕ್ ಪರಿಚಯವಾಗಿ ಸ್ನೇಹ ಬೆಳದಿದೆ. ಗ್ಯಾಪ್‍ನಲ್ಲಿ ಜೀವನಕ್ಕೆ ಟ್ರಾವಲ್ಸ್ ಏಜನ್ಸಿ, ಹಣಕಾಸು ವ್ಯವಹಾರವನ್ನು ನಡೆಸುತ್ತಿದ್ದು, ಬಂದ ಲಾಭದಲ್ಲಿ ‘ನಾಗಮಣಿ’ ಧಾರವಾಹಿಗೆ ಹಣ ಹೂಡುವುದರ ಮೂಲಕ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡರು. ಜೀ ವಾಹಿನಿಗೆ ಗೆಳಯ ನಿರ್ದೇಶನ ಮಾಡುತ್ತಿರುವ ‘ಕಮಲಿ’ ಧಾರವಾಹಿಗೆ ಪೂರ್ಣ ಪ್ರಮಾಣದ ನಿರ್ಮಾಪಕರಾಗಿದ್ದು, ಇವರೊಂದಿಗೆ ಅರವಿಂದ್‍ಕೌಶಿಕ್ ಪತ್ನಿಯ ಸತ್ವ ಮೀಡಿಯಾ ಕೈಜೋಡಿಸಿದೆ.
ಕಮಲಿಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಮೂಲ್ಯಗೌಡ ಮುಖ್ಯ ಭೂಮಿಕೆಯಲ್ಲಿ ನಟನೆ ಮಾಡಿದ್ದು, ವಿಭಿನ್ನ ಕತೆ ಹೊಂದಿದೆ. ಮೆಗಾ ಕಂತುಗಳು ಬರುವುದರಿಂದ ಎಲ್ಲಿಗೆ ನಿಲ್ಲುತ್ತದೆ ಎನ್ನುವುದನ್ನು ಈಗಲೇ ಹೇಳಲು ಬರುವುದಿಲ್ಲವಂತೆ. ಸುಖ ಸಂಸಾರದಲ್ಲಿ ಮೂರನೇ ಕ್ಲಾಸ್ ಓದುತ್ತಿರುವ ಮಗ, ಜೊತೆಗೆ ಪತ್ನಿ ಎಲ್ಲದರಲ್ಲೂ ಸಾಥ್ ನೀಡುತ್ತಿದ್ದಾರೆ. ಸ್ವಮೇಕ್ ಕತೆ ಇರುವ ಚಿತ್ರಗಳನ್ನು ಮಾಡುವ ಬಗ್ಗೆ ಚಿಂತನೆ ನಡೆಸಿ, ಅದಕ್ಕಾಗಿ ಸೂಕ್ತವಾದ ಕತೆಗಳನ್ನು ಆಲಿಸುತ್ತಿದ್ದಾರೆ. ಸದ್ಯ ಅವರ ಚಿತ್ತ ಕಿರುತೆರೆ ಮತ್ತು ಚಿತ್ರಗಳನ್ನು ನಿರ್ಮಿಸುವುದು. ಆಕರ್ಷಕ ಮೈಕಟ್ಟು, ಸ್ಪುರದ್ರೂಪಿಯಾಗಿದ್ದರೂ ನಟನೆ ಮಾಡದೆ ಕೇವಲ ನಿರ್ಮಾಣದತ್ತ ಒಲವು ತೋರಿದ್ದಾರೆ. ಎರಡು ದೋಣಿಯ ಪಯಣ ಅಪಾಯ ಖಚಿತವೆಂದು ಮನನ ಮಾಡಿಕೊಂಡಿರುವ ರೋಹಿತ್‍ಗೆ ಭವಿಷ್ಯದಲ್ಲಿ ಸದಭಿರುಚಿಯ ಚಿತ್ರಗಳು, ಧಾರವಾಹಿಗಳನ್ನು ನೀಡುವ ಅದಮ್ಯ ಬಯಕೆ. ಇವರ ಆಸೆ, ಯೋಜನೆ ಎಲ್ಲವು ಈಡೇರಲಿ ಎಂಬುದು ನಮ್ಮೆಲ್ಲರ ಹಾರೈಕೆ.
Be the first to comment