ಮತ್ತೆ ಪುಷ್ಪಾ ಚಿತ್ರ ವಿವಾದಕ್ಕೆ ಒಳಗಾಗಿದೆ. ಚಿತ್ರದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರ ಹೇಳಿಕೆ ವಿವಾದಕ್ಕೆ ಸಿಲುಕಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ದೇವಿಶ್ರೀ ಪ್ರಸಾದ್ ಅವರು, ‘ಐಟಂ ಸಾಂಗ್ ನನಗೆ ಭಕ್ತಿ ಗೀತೆ ಇದ್ದ ಹಾಗೆ. ಐಟಂ ಸಾಂಗ್ಗಳು ಒಂದು ರೀತಿಯ ಧ್ಯಾನವೂ ಹೌದು’ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಈ ಹೇಳಿಕೆಯನ್ನು ವಿರೋಧಿಸಿ ಪೊಲೀಸ್ ದೂರು ನೀಡಿದ್ದಾರೆ.
“ದೇವಿಶ್ರೀ ಅವರು ಐಟಂ ಸಾಂಗ್ ನ್ನು ಭಕ್ತಿ ಗೀತೆಗೆ ಹೇಗೆ ಹೋಲಿಸುತ್ತಾರೆ? ಅವರು ಅನಗತ್ಯವಾಗಿ ಹಿಂದೂ ಭಕ್ತಿ ಗೀತೆಗಳ ವಿರುದ್ಧ ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ. ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಕೂಡಲೇ ಕ್ಷಮೆ ಯಾಚಿಸಬೇಕು. ಕ್ಷಮೆಯಾಚಿಸದಿದ್ದರೆ ಹಿಂದೂ ಸಮುದಾಯದಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಅವರು, ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ದೇವಿಶ್ರೀ ಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈದರಾಬಾದ್ನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ದೇವಿಶ್ರೀ ಪ್ರಸಾದ್ ಕ್ಷಮೆಯಾಚಿಸದಿದ್ದರೆ ಅವರನ್ನು ತೆಲಂಗಾಣದಲ್ಲಿ ಸ್ವತಂತ್ರವಾಗಿ ತಿರುಗಾಡಲು ಬಿಡುವುದಿಲ್ಲ ಎಂದು ಶಾಸಕರು ಧಮ್ಕಿ ಹಾಕಿದ್ದಾರೆ.
ಒಂದಲ್ಲ ಒಂದು ವಿವಾದಕ್ಕೆ ಪುಷ್ಪಾ ಸಿನಿಮಾ ಸಿಲುಕಿದೆ. ಈ ಸಿನಿಮಾದ ಸಂಗೀತ ನಿರ್ದೇಶಕರು ತಮ್ಮ ಹೇಳಿಕೆಯ ಮೂಲಕ ಮೈಮೇಲೆ ಸಮಸ್ಯೆ ಎಳೆದು ಕೊಂಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಅವತರಣಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಮಾಡಿಲ್ಲ ಎನ್ನುವ ಕಾರಣಕ್ಕೆ ಕರ್ನಾಟಕದಲ್ಲಿ ಪುಷ್ಪಾ ಸಿನಿಮಾ ವಿರುದ್ಧ ಬಹುಷ್ಕಾರದ ಆಂದೋಲನ ಟ್ವಿಟ್ಟರ್ ನಲ್ಲಿ ಕಂಡು ಬಂದಿತ್ತು. ಚಿತ್ರದ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಡಬ್ ಮಾಡದ ಬಗ್ಗೆ ಕೂಡಾ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿತ್ತು.
Be the first to comment